ಬಂಬ್ರಾಣ ಬಯಲಲ್ಲಿರುವ ಗುತ್ತಿನ ಮನೆ ಮನೆಯಲ್ಲ, ಒಂದು ಅರಮನೆ. ವಿಶ್ವನಾಥ ಆಳ್ವರು ಹೇಳುವಂತೆ ಅದು ಈ ಕಾಲಕ್ಕೆ ಪ್ರಸ್ತುತವಲ್ಲ. ಅಂದಿನ ಅವಿಭಕ್ತ ಕುಟುಂಬ, ಬಯಲಲ್ಲಿ ಕೃಷಿಯ ಗೈಮೆ, ಬ್ರಿಟಿಷರು ಅಥವಾ ಅದಕ್ಕೆ ಹಿಂದಿನ ಆಡಳಿತದಡಿಯಲ್ಲೂ ನಿರಂತರ ಗೌರವಕ್ಕೆ ಪಾತ್ರವಾದ ಮತ್ತು ಅಂದಿನ ಸಾಮಾಜಿಕ ವ್ಯವಸ್ಥೆಗೆ ಅನಿವಾರ್ಯವಾದ ಮನುಷ್ಯಾಲಯದ ಮಾದರಿ ಅದು.
ಈ ದೊಡ್ಡ ಮನೆ, ಅದರ ಹೊರಗಿನ ಸುಭದ್ರ ಪ್ರಾಕಾರ, ಎದುರು ತೂಗಿಕೊಂಡಿರುವ ಪಲ್ಲಕ್ಕಿ, ಮಾಳಿಗೆಯಲ್ಲಿ ಕಾಣಸಿಗುವ ಗುಳೀತೋಪು, ಬಾಗಿಲು, ಏಣಿ ಮೆಟ್ಟೀಲುಗಳ ರಚನೆ, ನಡುಮುಂದಿಲು, ವಾಸದ ಕೋಣೆಗಳು, ಅವುಗಳ ಬಾಗಿಲುಗಳು, ಅಗಳಿ, ದಪ್ಪ ಕಂಬಗಳ ಕಲಾತ್ಮಕ ರಚನಾ ವಿಧಾನ, ಬಾಗಿಲ ಚಿತ್ರಾವಳಿಯ ಕೆತ್ತನೆ, ಮೂನ್ನೂರರಷ್ಟಿರುವ ದಡಿಗ ಅಡ್ಡ-ಪಕ್ಕಾಸುಗಳು, ಈಗಿನ ಮನೆಗಳ ಪಕ್ಕಾಸಿನಷ್ಟೇ ಗಾತ್ರದ ಬಳೆಗಳು - ಪತ್ತಾಯ ಮನೆ, ಬತ್ತದ ಸಿಹಿ ನೀರಿನ ಈಶಾನ್ಯ ಬಾವಿ, ಅಡುಗೆ ಮತ್ತು ಊಟದ ವಿಶಾಲ ಮನೆ ಮುಂತಾದುವು ಆ ಕಾಲದ ಅನಿವಾರ್ಯ ವಾಸ್ತುವಿಗೆ ಕೈಗನ್ನಡಿ ಆಗಿವೆ.
ಅಂದಿನ ಕಾಲ ಅಂಥಾದ್ದು. ಹೆಂಗಸರು, ಮಕ್ಕಳು, ಮುದುಕರು ಮನೆಯಿಂದ ಹೊರಗಿಳಿಯುವುದು ಸಲ್ಲದು. ಸಂಪ್ರದಾಯ ಅಲ್ಲ, ಜೀವ ಭಯ. ಬಾಗಿಲು, ಗೋಡೆ ಮುಂತಾದ ಸುಭದ್ರತೆ ಹಿಂಸ ಪ್ರಾಣಿಗಳ ಆಕ್ರಮಣಕ್ಕೆ ಸಹಜ ತಡೆ.
ಛಿದ್ರ ಕುಟುಂಬ, ವ್ಯಕ್ತಿ ನಿಷ್ಠ ಬದುಕಿನ ಈ ಕಾಲಕ್ಕೆ ಪರಸ್ಪರ ಮುಖ ನೋಡದೆ ಮೊಬೈಲಿನಿಂದಲೇ ಸಂಪರ್ಕ ಕಾಪಾಡಿಕೊಳ್ಳಬಹುದಾದ ಸೌಕರ್ಯವಿದೆ. ಪ್ರತಿಯೊಂದು ಕುಟುಂಬದ ವಿದ್ಯಾವಂತ ಮಕ್ಕಳು ಊರು ಬಿಟ್ಟು ನಗರ ಸೇರಿದ್ದಾರೆ. ಪ್ರತಿಭಾವಂತರು ವಿದೇಶಗಳಲ್ಲಿದ್ದಾರೆ. ಇತ್ತ ಹಳೆಯ ಗ್ರಾಮೀಣ ವ್ಯವಸ್ಥೆಗಳ ಶೈಲಿ, ಸಂವಿಧಾನ, ಚಟುವಟಿಕೆಗಳ ರೀತಿ ಸಂಪೂರ್ಣ ಬದಲಾಗಿದೆ. ಈ ಹಿನ್ನಲೆಯಲ್ಲಿ ಯಜಮಾನ ಶ್ರೀ ವಿಶ್ವನಾಥ ಆಳ್ವರು ಪೂಕರೆ ಗದ್ದೆಯ ಹತ್ತಿರದ ಇನ್ನೊಂದು ಆಧುನಿಕ ಮನೆಯಲ್ಲಿ ವಾಸವಾಗಿದ್ದಾರೆ.