ಶಿಶುವೊಂದು ತಾಯಿಯ ಒಡಲಿನಲ್ಲಿ ಮೂಡಿ ಬಂದಾಗಲೇ ದೈವಗಳಿಗೂ ಕಂದನಿಗೂ ಇರುವ ಸಂಬಂಧ ಶುರುವಾಗುತ್ತದೆ. ಚಿಗುರೊಡೆದು ಭ್ರೂಣ ಆರೋಗ್ಯವಂತ ಕಂದನಾಗಿ ಬೆಳೆದು ಬರಲು ಮನೆಯ ಹಿರಿಯರು ದೈವಗಳಿಗೆ ಹರಕೆ, ಕಾಣಿಕೆ ತೆಗೆದಿರಿಸುತ್ತಾರೆ. ತಾಯಿಯ ಗರ್ಭದಿಂದ ಭೂಮಿಗೆ ಬರುವ ಮುನ್ನವೇ ಆರಂಭಗೊಳ್ಳುವ ಈ ಬಂಧ ಬದುಕಿನ ಉದ್ದಕ್ಕೂ ಬಿಗಿಯಾಗುತ್ತದೆಯೇ ಹೊರತು ಸಡಿಲವಾಗದು.
ಅತೀತ ಶಕ್ತಿ
ಹಿಂದೂ ಧರ್ಮಕ್ಕೂ ದೈವ ದೇವರುಗಳಿಗೂ ಅವಿನಾಭಾವ ಸಂಬಂಧ. ತುಳುನಾಡು ದೈವಗಳ ನಾಡು. ಅಣ್ಣಪ್ಪ, ವೀರಭದ್ರ, ಜಟಾಧಾರಿ, ಬೊಬ್ಬರ್ಯ, ಗುಡ್ಡರ, ಕೊರತಿ, ಜೋಗಿ, ಪಂಜುರ್ಲಿ, ಗುಳಿಗ, ರಕ್ತೇಶ್ವರಿ, ಧೂಮಾವತಿ, ಕೊರಗು ಚನಿಯ, ಉಳ್ಳಾಲ್ತಿ, ಆಲಿಭೂತ, ಕಾನತ್ತೂರು ದೈವ, ಪೂಮಾಣಿ ಕಿನ್ನಿಮಾಣಿ..... ಒಂದೇ ಎರಡೇ....? ಮೊದಲಿಗೆ ದೈವಸ್ಥಾನಗಳಲ್ಲಿ ಆಚರಣೆಯಿಂದ ಬಂದ ಪದ್ಧತಿಗಳನ್ನು ಕ್ರಮೇಣ ಸ್ಥಳೀಯರು, ತಂತ್ರಿಗಳ ಮುಂದಾಳ್ತನದಲ್ಲಿ ನಿಗದಿತ ವಿಧಿವಿಧಾನಗಳ ಚೌಕಟ್ಟಿಗೆ ಅಳವಡಿಸಿಕೊಂಡರು. ದೈವಗಳು ಹಲವು ಕಾರಣಿಕ ಶಕ್ತಿ ವೈವಿಧ್ಯಮಯವಾದವು.
ವ್ಯಕ್ತಿಯೊಬ್ಬನಿಗೆ ತನ್ನ ಬದುಕಿನಲ್ಲಿ ನೋವು ನಲಿವಿನಲ್ಲಿ ಶರಣಾಗಲು ಇರುವುದೇ ಅತೀತ ಶಕ್ತಿ. ತನ್ನ ಇಕ್ಕಟ್ಟಿನ್ನಲ್ಲಿ ಸಂಕಟದಲ್ಲಿ ಹತಾಶೆಯಲ್ಲಿ ಬೇಡುವುದು ಆ ದೈವಶಕ್ತಿಗೆ. ದೈವಗಳು ಇರುವುದು ದುಷ್ಟರನ್ನು ನಿಗ್ರಹಿಸಿ ಶಿಷ್ಟರ ಪಾಲನೆಗಾಗಿ ಸತ್ಯ ಧರ್ಮದಿಂದ ದೂರಸರಿಯದೆ, ಭಕ್ತಿ ಶ್ರದ್ಧೆಗಳಿಂದ ನಂಬಿಕೊಂಡಲ್ಲಿ ದೈವದ ಕಾರಣಿಕತೆ ನೆರವಿಗೆ ಬರಲೇಬೇಕು. ಅಜ್ಞ ಕಂದನನ್ನು ತಾಯಿ ತಿದ್ದುತ್ತಾಳೆ. ಇಂತಹ ದೈವಗಳಿಗೆ ಹರಕೆ, ಕಾಣಿಕೆ ಸಂದಾಯವಾಗಬೇಕು. ಹೆಚ್ಚಾಗಿ ಸಮುದಾಯದ ಜನರ ಅಹಾರದ ಪದ್ಧತಿಯೇ ಹರಕೆ, ಕಾಣಿಕೆಯಲ್ಲಿ ಪ್ರಾತಿನಿಧ್ಯವಹಿಸುತ್ತವೆ. ದೈವಗಳಿಗೆ ಮಾಂಸಾಹಾರ ವಾಡಿಕೆ. ಕೋಳಿಯೇ ಮುಖ್ಯ ಆಹಾರವಾದಲ್ಲಿ ದೈವಕ್ಕೂ ಕೋಳಿ, ಮೀನು ಇದ್ದಲ್ಲಿ ಅದೇ. ಹಾಗೇ ಆಡು, ಕುರಿ. ಕೇರಳದ ಒಳಭಾಗದ ದೈವಕ್ಷೇತ್ರವೊಂದರಲ್ಲಿ ಮದ್ಯವೇ ದೈವದ ಪ್ರಸಾದ. ತಾಂತ್ರಿಕ ವಿಧಿವಿಧಾನಗಳಿಂದ ವರ್ಷಕ್ಕೊಮ್ಮೆ ಎಲ್ಲರೂ ಸೇರಿ ನಡೆಯಿಸುವ ಕೋಲ, ಉತ್ಸವಗಳು, ಮನುಷ್ಯರ ನಂಬಿಕೆ, ಸಮುದಾಯದ ನಿಷ್ಠೆ, ನಿಯಮ ನೇಮಗಳ ಕಾರಣಿಕೆಯನ್ನು ಬೆಳೆಸುತ್ತವೆ. ಅಭಿವೃದ್ಧಿ, ಕಾರ್ಯಸಿದ್ಧಿ, ಯಶಸ್ಸು, ವಿದ್ಯೆ, ಸಂಪತ್ತು, ಸಂತಾನ, ರೋಗಮುಕ್ತಿ, ಜಗಳ, ರಾಜಿ, ಸಂಧಾನ ಎಲ್ಲವೂ ಕಾರಣಿಕ ಕ್ಷೇತ್ರಕ್ಕೆ ಒಪ್ಪಿಸಲ್ಪಡುತ್ತದೆ.
ಎಲ್ಲರೂ ಸಮಾನರು
ದೈವದ ಆರಾಧನೆಯಲ್ಲಿ ನಲಿಕೆ, ಪರವ, ಪಂಬದರು ಕೇಂದ್ರ ವ್ಯಕ್ತಿಗಳಾದರೂ ಸಮುದಾಯವಿಡೀ ಪಾಲ್ಗೊಳ್ಳುತ್ತದೆ. ಇದರಿಂದಾಗಿ ದೈವಾರಾಧನೆಗೆ ಸಾಮಾಜಿಕ ಸ್ವರೂಪ ಒದಗಿಬಂದಿದೆ. ಪಾಡ್ದನಗಳಲ್ಲಿ ಅಸಮಾನತೆ, ಶೋಷಣೆಗೆಲ್ಲ ವಿರುದ್ಧದ ದನಿಯಿದೆ. ಅಸ್ಪೃಶ್ಯನೊಬ್ಬ ಸ್ಪರ್ಶ್ಯನಾಗುವ, ದೈವದ ಆವಾಹಕನಾಗಿ ದೈವದ ಮುಖವಾಣಿಯಾಗುವಾಗ ಕುಲಾಚಾರಗಳ ಪ್ರಕಾರ ಮೇಲುವರ್ಗದವರೂ ಆತನಿಗೆ ತಲೆಬಾಗಲೇ ಬೇಕು.
ಶ್ರೀ ಕ್ಷೇತ್ರ ಅಂಬಿಲಡ್ಕದ ಕಾರ್ಣಿಕದ ಕಥೆ
ಉಲ್ಲೇಖಿಸಬಹುದಾದ ಮತ್ತು ಬಾರದ ಅಂಬಿಲಡ್ಕದ ದೈವಗಳ ಕಾರಣಿಕಗಳು ನೂರಾರಿವೆ. ಅವುಗಳು ವರದಾನದ, ಶಾಪದ, ಸಮಸ್ಯಾಪೂರಣದ - ಹೀಗೆ ಬೇರೆ ಬೇರೆ ಸ್ವರೂಪದಲ್ಲಿದೆ.
ಮುನ್ನೂರು ವರ್ಷಗಳ ಹಿಂದೆ ಕ್ಷೇತ್ರದ ತೆಂಕು ಭಾಗದಲ್ಲಿ ದೈವಗಳ ಬಂಡಿ ಇತ್ತು. ಒಂದು ವರ್ಷ ಕಾರಣಾಂತರದಿಂದ ಬಂಡಿ ಉತ್ಸವ ನಡೆಯಲಿಲ್ಲ. ಜಾತ್ರೆ ನಡೆಸದೆಯೂ ಇದ್ದಕ್ಕಿದ್ದಂತೆ ಬಂಡಿ ಚಲಿಸಿರಬೇಕು. ಅದು ಕ್ಷೇತ್ರಕ್ಕೆ ಮೂರು ಪ್ರದಕ್ಷಿಣೆ ಬಂದು ಮೊಗ್ರಾಲು ಪುತ್ತೂರಿನ ಸಮೀಪದ ಬೆದ್ರಡ್ಕದ ವಿಶಾಲ ಮೈದಾನದಲ್ಲಿ ನಿಂತಿತ್ತು! ಬೆಳಗಿನ ನಸುಕಿನಲ್ಲಿ ಪರಿಸರದ ನಿವಾಸಿಗಳು ಅದನ್ನು ಕಂದವರೇ ಹೆದರಿಕೊಂಡರು. ವಿಷಯ ತಿಳಿದ ಕೋಟೆಕುಂಜ ಮನೆಯವರು ಇದು ಅಂಬಿಲಡ್ಕದ ಬಂಡಿ ಎಂದು ಗುರುತಿಸಿದರು. ವಾರ್ತೆ ಹಬ್ಬಿದ್ದೇ ಬಂಬ್ರಾಣ ಮನೆ - ಗ್ರಾಮದ ಜನರು ಸಾವಿರ ಸಂಖ್ಯೆಯಲ್ಲಿ ಕೊಂಬು ವಾದ್ಯ ಸಮೇತ ಅಲ್ಲಿಗೆ ಮೆರವಣಿಗೆ ಬಂದರು. ದೈವಕ್ಕೆ ಪ್ರಾರ್ಥನೆ ಸಲ್ಲಿಸಿ ಎಳೆದರೆ ಬಂಡಿ ಮಿಸುಕಾಡಲಿಲ್ಲ! ಹಾಗೆ ಬಂಡಿ ಅಲ್ಲೇ ನಿಂತದ್ದರಿಂದ ಮುಂದೆ ಪೂಮಾಣಿ-ಕಿನ್ನಿಮಾಣಿ ದೈವಗಳಿಗೆ ಕುದುರೆಯೇ ವಾಹನವಾಯಿತು.
ಹಿಂದೊಮ್ಮೆ ಬರಗಾಲ ಬಂದಿದ್ದಾಗ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿ ಮನೆ ತಲುಪುವಷ್ಟರಲ್ಲಿ ಸುರಿಮಳೆಯಾದದ್ದು, ನಡುನೇಮದ ದಿನ ಕಾಟಕಾಯಿ ಸುಬ್ರಾಯಗಳು ಆಚೆಕರೆ ಇಚ್ಲಂಗೋಡಲ್ಲಿ ಬೀಡುಬಿಟ್ಟು ಈಚೆ ನೋಡಿದಾಗ ಮಧ್ಯಾಹ್ನವೇ ರಾತ್ರಿಯಂತೆ ಕಂಡು ಅವರು ಮರಳಿದ್ದು ಒಂದು ಬಗೆಯದ್ದಾದರೆ, ಬೂಳ್ಯದ ವಿಷಯದಲ್ಲಿ ತಗಾದೆ ತೆಗೆದವರು ಪಶ್ಚಾತ್ತಾಪ ಪಡುವಂತೆ ಮಾಡಿದ್ದು, ನಡೆಯಲ್ಲಿ ತಪ್ಪಿದವರ ಸುತ್ತ ಸರ್ಪ ಹರಿದಾಡಿ ಅವರು ತಪ್ಪೊಪ್ಪಿಕೊಂಡು ಬದುಕಿದ್ದು, ಕೋಳಿಗುಂಟದ ಮುಹೂರ್ತ ತಪ್ಪಿಸಿದ್ದಕ್ಕೆ ದೈವ ದಂಡಿಸಿದ್ದು, ವ್ಯಭಿಚಾರ ನಡೆಸಿದ್ದಕ್ಕೆ ಶಿಕ್ಷೆಯಾದದ್ದು, ಕಾಣಿಕೆ ಡಬ್ಬಿ ಬಳಿ ಬಂದು ಅನ್ಯಾಯಕ್ಕೆ ಯೋಚಿಸಿದವರು ಸಂಕಪಾಲೆ ಸರ್ಪದಿಂದ ಓಡಿಸಲ್ಪಟ್ಟದ್ದು. ಹೀಗೆ ಒಂದೇ ಎರಡೇ? ಇವೆಲ್ಲ ದೈವಾರಾಧಕರು ಕಂಡದ್ದು, ಕೇಳಿದ್ದು ಮತ್ತು ಅನುಭವಿಸಿದ್ದು ಎಂದಾದ ಮೇಲೆ ದೈವಗಳ ಕಾರಣಿಕಕ್ಕೆ ವಿವರಣೆ ಬೇರೆ ಬೇಕೆ?