ಬೀರ್ಣಾಳ್ವ ಮತ್ತು ಅರಸು ದೈವಗಳು
ಅಂಬಿಲಡ್ಕದಲ್ಲಿ ಬೀರ್ನಾಳ್ವ ದೈವಕ್ಕೆ ಭಾರೀ ಮನ್ನಣೆ ಇದೆ. ಈ ಪದದ ಹಿಂದೆ ಮಹತ್ವದ ಚರಿತ್ರೆ ಅಡಗಿದೆ. ವಿಶಾಲಾರ್ಥದಲ್ಲಿ ಬೀರ್ನಾಳ್ವ, ಪುತ್ತಿಗೆಯ ದೂಮಾವತಿ, ಜುಮಾದಿ, ರಾಜರಾಜೇಶ್ವರಿ, ಕಲ್ಲುರ್ಟಿ, ಪಿಲಿ ಚಾಮುಂಡಿ ಎಲ್ಲಾ ಒಂದೇ ಎನ್ನಬಹುದು. ಈ ವಿಷಯಗಳಲ್ಲಿ ಶ್ರೀ ಉದಯವರ್ಮರಾಜ ಅವರು ತುಳುನಾಡ ಗತವೈಭವದಲ್ಲಿ ಕೊಟ್ಟಿರುವ ವಿಚಾರ, ವಿವಿಧ ಸಂದರ್ಭಗಳಲ್ಲಿ ನಡೆದ ಸ್ವರ್ಣಪ್ರಶ್ನೆಗಳು, ಇತರ ದೈವಸ್ಥಾನಗಳ ಸ್ಥಳ ಪುರಾಣಗಳೆಲ್ಲ ಸಮಾನ ಮಾಹಿತಿ ಹೊಂದಿವೆ.
ಮಾಯಿಪ್ಪಾಡಿ ಅರಸರಿಗೆ ರಾಜರಾಜೇಶ್ವರಿ ಎಂಬ ಆರಾಧ್ಯ ದೈವವಾಗುವ ಮೊದಲು ಬೀರ್ನಾಳ್ವ ಪ್ರಕರಣ ಬರುತ್ತದೆ. ಕುಂಬ್ಳೆ ಅರಸೊತ್ತಿಗೆ ಆಗ ಮಾಯಿಪ್ಪಾಡಿಯಲ್ಲಲ್ಲ, ಕುಂಬ್ಳೆಯ ಹತ್ತಿರ ಇತ್ತು. ಈ ಅರಸರು ಹೆಂಡಿನ ಅಗತ್ಯಕ್ಕಾಗಿ ರಾಜ ಮಾರ್ಗದ ಹತ್ತಿರ ಒಂದು ಬೃಹತ್ ಮರವನ್ನು ಉಳಿಸಿಕೊಂಡಿದ್ದರಂತೆ. ದಲ್ಲಾಳನೊಬ್ಬ ಅದನ್ನು ಕಡಿಸಿಬಿಟ್ಟ. ಆದರೆ ಪಶ್ಚಾತ್ತಾಪ ಪಡುವ ಬದಲು ಪಡುಮಲೆಗೆ ಪರಾರಿ ಆದ.
ಅರಸರಿಗೆ ಇದು ಕಿರಿಕಿರಿಯೆನಿಸಿತು. ಇದೇ ವೇಳೆ ನೆಕ್ರಾಜೆಯ ಹತ್ತಿರ ಪೆರಿಕೊಳ್ಳಿ ಎಂಬ ಕಮ್ಮಾರನಿದ್ದ. ಅದೇ ಪ್ರದೇಶದವನಾದ ಬೀರಣ್ಣ ಬಂಟ ಎಂಬ ಅವನ ದಣಿಗಳು ಅವನನ್ನು ಕಾಣಲು ಬಂದಿದ್ದರು. ಆಚಾರಿ ಕಾಲಕಾಲದಿಂದ ತನ್ನ ಹತ್ತಿರ ಇಟ್ಟುಕೊಂಡ ಕಲ್ಲುರ್ಟಿ ಎಂಬ ಸಂಕಲ್ಪದಿಂದ ಆರಾಧಿಸುತ್ತಿದ್ದ ಕತ್ತಿಯಂತಹ ಕಬ್ಬಿಣದ ತುಂಡಿನಿಂದಲೆ ಕತ್ತಿ ಮಾಡಿಕೊಡು ಎಂದು ಅವರು ಕೇಳಿದರು. ಅವನು ಈ ಬಯಕೆಯನು ತಳ್ಳಿಹಾಕುತ್ತಾ ಹೋದ. ಕೊನೆಗೊಮ್ಮೆ ತಾಳ್ಮೆ ಕಳಕೊಂಡ ಬೀರಣ್ಣ ಅದನ್ನು ಎತ್ತಿಕೊಂಡು ಈಗಲೇ ಮಾಡಿಕೊಡು ಎಂದು ದುಂಬಾಲು ಬಿದ್ದರು. ಬೀರಣ್ಣನ ಮೇಲೆ ಕಲ್ಲುರ್ಟಿಯ ಅವೇಶವಾದಾಗ "ಈ ವರೆಗೆ ದೈವದ ಕತ್ತಿಯಿದನ್ನು ನಾನು ನೋಡಿಕೊಂಡೆ ಇನ್ನು ನೀವು ಪರಿಪಾಲನೆ ಮಾಡಿ" ಎಂದು ಆಚಾರಿ ಕತ್ತಿ ನಿರ್ಮಿಸಿ ಒಪ್ಪಿಸಿಕೊಟ್ಟು ಕೈ ಮುಗಿದು ಬಿಟ್ಟ.
ಅವೇಶಗೊಂಡ ಮೇಲೆ ಅದೀಗ ಬೀರಣ್ಣ ದೈವ! ಕುಂಬ್ಳೆ ರಾಮನಾಥ ಅರಸನಲ್ಲಿ ಪ್ರಶ್ನೆ ನಡೆಯುತ್ತಿದ್ದ ವೇಳೆ ದೈವ ಅಲ್ಲಿಗೆ ಬಂತು. ಬೀರಣ್ಣನನ್ನು ನೋಡಿ ಅರಸ ಹೇಳಿದನಂತೆ -
"ಅಂಥಾ ಕಾರ್ಣಿಕದ ದೈವ ನೀನಾಗಿದ್ದರೆ ಮರ ಕಡಿದವರ ಮೂಗು ಛೇದಿಸಿ ತಂದುಕೊಟ್ಟರೆ ನಮ್ಮ ಸೀಮೆಯಲ್ಲಿ ಪಟ್ಟದ ದೈವದ ಸ್ಥಾನ ಕೊಡಿಸಿ ನಡೆಸಿಕೊಂಡೇವು".
ಬೀರ್ನಾಳ್ವ ದೈವ ಹಾಗೇ ಮಾಡಿತು. ಆದರೆ ಅಲ್ಲಿಂದ ಘಟ್ಟ ಇಳಿದು ಗುರುತುಗಳ ಸಹಿತ ಬರುತ್ತಿದ್ದ ವೇಳೆ ಪೂಮಾಣಿ-ಕಿನ್ನಿಮಾಣಿ ದೈವಗಳು ತಡೆದು ನಿಲ್ಲಿಸಿದವು. ಬೀರ್ನಾಳ್ವ ವಂದಿಸಿಕೊಂಡು ಮಾತನಾಡಿಸಿತು ತನ್ನ ಕಾರುಬಾರನ್ನು ಅದರ ಉದ್ದೇಶವನ್ನೂ ವಿವರಿಸಿತು -
"ಇದನ್ನು ಮನ್ನಿಸಬೇಕು. ಈ ಕೆಲಸಕ್ಕೆ ಇಂಬು ಕೊಡಬೇಕು. ಹಾಗೆ ಮಾಡಿಸಿದಿರಾದರೆ ನಮ್ಮ ಅರಸನ ಸೀಮೆಯೊಳಗೆ ನಿಮಗೆ ಸ್ಥಾನವನ್ನು, ಪಾಪೆ ಬಂಡಿಯನ್ನೂ ಮಾಡಿಸಿಕೊಡುತ್ತೇನೆ" ಎಂದು ಅರಿಕೆ ಮಾಡಿಕೊಂಡಿತಂತೆ.
ಹೀಗೆ ಈ ಐತಿಹ್ಯ ಪ್ರಕಾರವೂ ಅರಸು ದೈವಗಳನ್ನು ಸೀಮೆಯೊಳಗೆ ತಂದ ದೈವವೇ ಬೀರ್ನಾಳ್ವ ದೈವ. ಬೀರ್ನಾಳ್ವ ದೈವದ ಶಕ್ತಿಯನ್ನು ಶಿವ ಪಾರ್ವತಿ ಸಂಕಲ್ಪದಿಂದ ಕಾಣಲಾಗುತ್ತಿದೆ.