ಪರಶುರಾಮ ಕ್ಷೇತ್ರವಾದ ತುಳುನಾಡಿನಲ್ಲಿ ಅನೇಕ ದೇವರುಗಳು ನೆಲೆಸಿರುತ್ತಾರೆ. ಈ ನಾಡನ್ನು ದೈವ ದೇವರುಗಳ ನಾಡು ಎಂದೂ ಕರೆಯುವ ಪ್ರತೀತಿಯು ಇದೆ. ಇಲ್ಲಿ ನೆಲೆಸಿರುವ ದೈವಗಳಿಗೆ ಅದರದ್ದೇ ಆದ ಒಂದೊಂದು ಸತ್ಯ ಐತಿಹ್ಯಗಳು ಇದೆ. ಅಂತೆಯೇ ಅರಸು ದೈವಗಳಲ್ಲಿ ಮೇಲ್ಪಂಕ್ತಿಯಲ್ಲಿರುವ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಿಗೆ ಸುಮಾರು 700 ವರ್ಷಗಳ ಹಿಂದಿನ ಚರಿತ್ರೆಯಿದೆ. ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ರಾಜ ವೈಭವದಲ್ಲಿ ಮೆರೆಯುವ ಕ್ಷೇತ್ರ. ಈ ಕ್ಷೇತ್ರದ ಹೆಸರನ್ನು ಕೇಳದವರು ಬಹುಶಃ ತುಂಬಾ ಕಡಿಮೆ. ಏಕೆಂದರೆ ಈ ಕ್ಷೇತ್ರ ಸಾಧಾರಣ ಕ್ಷೇತ್ರವಲ್ಲ. ಶ್ರೀ ದೈವಗಳ ಸತ್ಯಘಟನೆ ಸಂಬಂಧಿತ ಅನೇಕ ಕುರುಹುಗಳು ಇದೀಗಲೂ ನಮ್ಮ ತುಳುನಾಡಿನಲ್ಲಿ ಕಾಣಸಿಗುತ್ತದೆ. ಅನಾದಿ ಕಾಲದಿಂದಲೂ ಇಲ್ಲಿಯ ದೈವಶಕ್ತಿ ಎಂಬುದು ಶರೀರಕ್ಕೆ ಶಕ್ತಿಯಾಗಿ ದೇಹಕ್ಕೆ ಆತ್ಮವಾಗಿ ಆಸ್ತಿಕರ ಶ್ರದ್ಧಾಭಕ್ತಿಯ ಕಾರ್ಣಿಕ ಶಕ್ತಿ ಕೇಂದ್ರವಾಗಿದ್ದು. ಇಲ್ಲಿ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿದೆ. ಎಲ್ಲೇ ಇದ್ದರೂ ಕೂಡ ತಮ್ಮ ಕಷ್ಟಗಳಿಗೆ ಇಲ್ಲಿನ ದೈವಗಳನ್ನು ನೆನಸಿ ಹರಕೆ ಕಟ್ಟಿಕೊಂಡರೆ ಆದಷ್ಟು ಬೇಗನೆ ನೆನೆಸಿದ ಕಾರ್ಯವನ್ನು ಈಡೇರಿಸುವ ದೈವಶಕ್ತಿ ಇಲ್ಲಿಯದಾಗಿದೆ.
ಅರಸು ದೈವಗಳಾದ ಪೂಮಾಣಿ ಕಿನ್ನಿಮಾಣಿ ದೈವಗಳು ಒಂದೇ ತೊಟ್ಟಿಲಲ್ಲಿ ಜನಿಸಿ ಮೇಘಲೋಕದಿಂದ ತುಳುನಾಡಿಗೆ ಬಂದರೆಂಬ ಪ್ರತೀತಿ ಇದೆ. ವೈದಿಕವಾಗಿ ಇವರು ಶ್ರೀರಾಮ ಲಕ್ಷ್ಮಣರ ಅವತಾರವೆಂದು ನಂಬುತ್ತಾರೆ. ಬೆಳ್ಳಿ ಕುದುರೆಯಲ್ಲಿ ಪಶ್ಚಿಮಘಟ್ಟದ ಮೇಲಿಂದ ಯಾತ್ರೆ ಆರಂಭಿಸಿದ ದೈವಗಳು ಘಟ್ಟ ಕುಮಾರ ಪರ್ವತ ಇಳಿದು ಬರುತ್ತಿರುವ ಸುಬ್ರಹ್ಮಣ್ಯ ದೇವರು ತಡೆಯೊಡ್ಡಿದ ಕಾರಣ ಕೋಪಗೊಂಡ ತಮ್ಮ ಕಿನ್ನಿಮಾಣಿ, ಕುಕ್ಕೆ ಕ್ಷೇತ್ರದ ಧ್ವಜಸ್ತಂಭಕ್ಕೆ ಬಾಣ ಪ್ರಯೋಗಿಸಿ ತುಂಡರಿಸಿದ್ದರಿಂದ ಅಣ್ಣ ತಮ್ಮ ದೈವಗಳಿಗೆ ಮತ್ತು ಸುಬ್ರಾಯ ದೇವರಿಗೆ ಏಳು ಹಗಲು ಮತ್ತು ಏಳು ರಾತ್ರಿ ಯುದ್ಧವು ನಡೆದು ಸುಬ್ರಾಯ ದೇವರಿಗೆ ಇವರು ದೇವಾಂಶ ಸಂಭೂತರೆಂದು ತಿಳಿದು, ರಾಜಿಯಾಗಿ, ದೈವಗಳು ಯುದ್ಧ ಮಾಡಿದ ತಪ್ಪಿಗಾಗಿ ಅನ್ನದಾನಕ್ಕೆಂದು ಹದಿನಾರು ಕೈಗಳಿರುವ ಚಿನ್ನದ ಕೊಪ್ಪರಿಗೆಯನ್ನು ಒಪ್ಪಿಸಿದ್ದಲ್ಲದೆ ತಮ್ಮ ತಂಗಿಯಾದ ದೈಯ್ಯಾರೆಯನ್ನು ಹೊಸುಗುಳಿಯಮ್ಮನಾಗಿ ಅಲ್ಲೇ ನೆಲೆಯೂರಿಸಿ, ಕುಕ್ಕೆಯಿಂದ ಹೊರಟ ಶ್ರೀ ಅರಸು ದೈವಗಳು ಸುಳ್ಯ ಸೀಮೆ ಮತ್ತು ಪುತ್ತೂರು ಏಳ್ನಾಡು ಪ್ರದೇಶಗಳಲ್ಲಿ ಹಲವಾರು ಕಾರಣಿಕಗಳನ್ನು ಪ್ರದರ್ಶಿಸಿ, ಹಲವಾರು ಕಡೆಗಳಲ್ಲಿ ನೆಲೆಯೂರಿ, ತುಳುನಾಡಿನಲ್ಲೇ ಸತ್ಯದ ಸೀಮೆ ಎಂಬ ಅಭಿಧಾನಕ್ಕೆ ಪಾತ್ರವಾದ ಕುಂಬಳೆ ಸೀಮೆಯ ಪ್ರದೇಶವಾದ ಪಡುಮಲೆಗೆ ಬಂದರು. ಅಲ್ಲಿಂದ ಮುಂದೆ ಪೂಮಾಣಿ ಕಿನ್ನಿಮಾಣಿ ದೈವಗಳು ಮೊದಲು ಅಡೂರಿನಲ್ಲಿ ಮಹಾಲಿಂಗೇಶ್ವರನಿಗೆ ಕಪ್ಪವನ್ನು ನೀಡಿ. ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟದ ದೈವವಾದ ಬಿರ್ಣಾಳ್ವ ಮಾತು ಧೂಮಾವತಿಯನ್ನು ಭೇಟಿಯಾಗಿ ಅವರನ್ನು ಒಲಿಸಿ, ತಮ್ಮ ಜೊತೆ ಕಾರಣಿಕ ಮೆರೆಯಲು ಜೊತೆಯಾಗಿ ಸವಾರಿ ಆರಂಭಿಸಿ ತಮ್ಮ ಯಾತ್ರೆಯ ಉದ್ದೇಶದಂತೆ "ಆದಿ ಪಡುಮಲೆ ಅಂತ್ಯ ಪುತ್ಯೆ"ಯ ಪ್ರಕಾರ ಪೈಕ, ಬೆದ್ರಡ್ಕ ಕ್ಷೇತ್ರಕ್ಕೆ ಆಗಮಿಸಿ, ಆಲಿಯೂ ಧ್ವಜವೇರಿಸಿ, ಜಾತ್ರೋತ್ಸವ ನಡೆಸಿ, ಬೆಳ್ಳಿಯ ಕುದುರೆಯ ಮೂಲಕ ಪುತ್ತಿಗೆಗೆ ಹೋಗುತ್ತಿರಲು, ದಾರಿಯಲ್ಲಿ "ಅಂಬಿಲಡ್ಕ" ಎಂಬ ಪುರಾತನ ಧರ್ಮದ ತಾಣದಲ್ಲಿ ಕಟ್ಟೆಯನ್ನು ಕಂಡು ವಿಶ್ರಮಿಸುವರು. ಆಗ ಅಲ್ಲಿ ವಿಶ್ರಮಿಸುತ್ತಿರುವ ಈ ಇಬ್ಬರು ರಾಜಕುಮಾರರು ಮತ್ತು ಅವರ ಪರಿವಾರವನ್ನು ಬಂಬ್ರಾಣ ರಾಜಮನೆತನದ ಮಹಾಮಹಿಮರಾದ ಶ್ರೀ ಶಾಂತಾಳ್ವರು ಕಂಡು ಅತ್ಯಂತ ಆಶ್ಚರ್ಯಗೊಂಡು ಕಿದೂರು ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳಲ್ಲಿ ಕೇಳಲು, ತಂತ್ರಿಗಳು ಅವರಿಗೆ ಪೂಮಾಣಿ ಕಿನ್ನಿಮಾಣಿ ದೈವಗಳ ಇಷ್ಟ ತಿಳಿಸಲು, ಮಹಾಮಹಿಮ ಬಂಬ್ರಾಣ ಯಜಮಾನ ಶ್ರೀ ಶಾಂತಾಳ್ವರು ತಮ್ಮ ಜೊತೆಯಿದ್ದ ಗ್ರಾಮದ 7 ಪ್ರತಿಷ್ಠಿತ ಮನೆತನಗಳಾದ ಬಂಬ್ರಾಣಬೈಲು ಕಿಞ್ಞಿಣ್ಣ, ಕೆಳಗಿನ ಬೈಲು ಸಂಕರ, ನೀಲಪ್ಪಾಡಿ ಸೇಕ, ಉಜಾರು ಸಂಕಯ್ಯಾಳ್ವ, ಮುಗೇರ್ (ಕಾರ್ನಾಪ್ಪಾಡಿ) ಕೊಂಡೆ, ಕೆಳಗಿನ ಉಜಾರ್ ಸಾಂತ ಹಾಗೂ ಮುಗೇರಿನ ಸಾಂತರನ್ನು ಸೇರಿಸಿ ಅಂಬಿಲಡ್ಕದಲ್ಲಿ ಆರಾಧನೆ ಆರಂಭಿಸಿದರು. ಅಲ್ಲಿಂದ ಮುಂದೆ ಪುತ್ತಿಗೆಗೆ ಅಣ್ಣ-ತಮ್ಮ ದೈವಗಳ ಸವಾರಿ ಆರಂಭಗೊಂಡಾಗ ಪಟ್ಟದದೈವ ಬೀಣಾಳ್ವನು ಅಂಬಿಲಡ್ಕದ ಧರ್ಮದ ಮಣ್ಣಿನಲ್ಲೇ ನೆಲೆಯಾದನು ಹಾಗೂ ಧೂಮಾವತಿ ತಾಯಿಯು ಪುತ್ತಿಗೆಯ ಕಡೆಗೆ ಅಣ್ಣ ತಮ್ಮ ದೈವಗಳ ಜೊತೆ ಸವಾರಿ ಹೊರಟು ಅಂತ್ಯ ಪುತ್ತಿಗೆಯಲ್ಲಿ ನೆಲೆಯಾದರು.
ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಕ್ಷೇತ್ರಕ್ಕೆ, ಕಿದೂರು ಶ್ರೀ ಮಹಾದೇವ ಕ್ಷೇತ್ರಕ್ಕೂ ಹಾಗೂ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ದೈವ-ದೈವಗಳ ಕ್ಷೇತ್ರ ಸಂಬಂಧ ಮಾತ್ರವಲ್ಲದೇ ಈ ಕ್ಷೇತ್ರಗಳಿಗೆ ಪರಂಪರಾಗತವಾಗಿ ಅನುವಂಶಿಕ ಮೊಕ್ತೇಸರರು ಬಂಬ್ರಾಣದ ಯಜಮಾನರೇ ಆಗಿದ್ದು. ಇಂದಿಗೂ ಕಿದೂರು ಶ್ರೀ ಮಹಾದೇವ ಕ್ಷೇತ್ರಕ್ಕೆ ವಿಶೇಷ ದಿನದ ಉತ್ಸವಗಳಲ್ಲಿ ಈ ಉಳ್ಳಾಕುಲ ಕ್ಷೇತ್ರದಿಂದ ಭಂಡಾರ ಹೋಗಿಯೇ ಆಗಬೇಕು ಹಾಗೂ ಕಿದೂರು ಕ್ಷೇತ್ರದಿಂದ ಅಂಬಿಲಡ್ಕ ಜಾತ್ರೆಯ ಸಂದರ್ಭದಲ್ಲಿ ಭಂಡಾರ ಬರುವ ಕ್ರಮ ನಡೆದುಕೊಂಡು ಬರುತ್ತಿದೆ. ಹಾಗೆಯೇ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದ ಉತ್ಸವವು ಅನುವಂಶಿಕ ಮೊಕ್ತೇಸರರಾದಂತಹ ಬಂಬ್ರಾಣದ ಯಜಮಾನರ ಉಪಸ್ಥಿತಿಯಲ್ಲಿಯೇ ನಡೆಯುವ ಹಾಗೂ ಪಾರೆಸ್ಥಾನದ ದೈವಗಳು ಅಂಬಿಲಡ್ಕದ ದೈವಗಳನ್ನು ಅಂಬಿಲಡ್ಕದಲ್ಲಿ ಭೇಟಿಮಾಡುವ ಸಂಪ್ರದಾಯವೂ ಇದೆ.
ಕುಂಬಳೆಯು ಬೆಡಿ ಉತ್ಸವಕ್ಕೆ, ಪೊಳಲಿಯು ಚೆಂಡಿನ ಉತ್ಸವಕ್ಕೆ ಹೇಗೆ ಹೆಸರುವಾಸಿಯಾಗಿದೆಯೋ ಹಾಗೆಯೇ ಬಂಡಿ ಉತ್ಸವ ಮತ್ತು ಸಾಂಪ್ರದಾಯಿಕ ಕೋಳಿಕಟ್ಟಕ್ಕೆ ಹೆಸರು ಪಡೆದ ಕ್ಷೇತ್ರವೂ ಹೌದು. ಇಂದಿಗೂ ಕೂಡ ಈ ದೈವಸ್ಥಾನದ ಆಡಳಿತ ಮತ್ತು ನಿರ್ವಹಣೆ ಪರಂಪರಾಗತವಾಗಿ ಬಂಬ್ರಾಣ ರಾಜಮನೆತನದ ಯಜಮಾನ ಶ್ರೀ ಶಾಂತಾಳ್ವರ ನೇತೃತ್ವ ಮತ್ತು ಸಾರಥ್ಯದಲ್ಲಿಯೇ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವ-ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ. ಮಾಸಿಕ ಸಂಕ್ರಾಂತಿ ಹಾಗೂ ವಿಶೇಷ ಸಂದರ್ಭಗಳಲ್ಲಿ ದೈವಗಳಿಗೆ ತಂಬಿಲಪೂಜೆ, ಪತ್ತನಾಜೆ, ದೀಪಾವಳಿ ಪರ್ಬ, ಇತ್ಯಾದಿ ಪ್ರಾಚೀನ ಸಾಂಪ್ರದಾಯಿಕ ಪದ್ಧತಿಗಳನ್ನು ಇಂದಿಗೂ ಇಲ್ಲಿ ತಪ್ಪದೆ ಆಚರಿಸಲ್ಲಾಗುತ್ತಿದೆ. ದೈವಗಳಿಗೆ ಹರಕೆಯ ತಂಬಿಲಗಳನ್ನು ಸಂಕ್ರಾಂತಿಯ ನಂತರದ ೨ ದಿನಗಳಲ್ಲಿ ಸಲ್ಲಿಸಲಾಗುತ್ತದೆ. ವರ್ಷಂಪ್ರತಿ ಎಪ್ರಿಲ್ ತಿಂಗಳಿನ ಐದು ದಿನ ಕ್ಷೇತ್ರದ ಅನುವಂಶಿಕ ಮೊಕ್ತೇಸರರ ಮುಂದಾಳತ್ವದಲ್ಲಿ ಇಲ್ಲಿ ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಮತ್ತು ಮೌಲ್ಯಗಳನ್ನು ಎತ್ತಿಹಿಡಿದು ಆ ಶಕ್ತಿಗಳ ಕೀರ್ತಿ-ಕಾರ್ಣಿಕ ಮೆರೆಸುವ ವಾರ್ಷಿಕ ಜಾತ್ರೆಯನ್ನು ಅದ್ಧೂರಿಯಾಗಿ ಅತೀ ವಿಜೃಂಭಣೆಯಿಂದ ನಡೆಸಲಾಗುತ್ತದೆ. ದೈವಗಳ ಸಾಕಾರದ ಈ ಅಪ್ರತಿಮ ನೇಮೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಅಲ್ಲದೆ ಹೊರ ರಾಜ್ಯಗಳಿಂದಲೂ ಕೂಡ ಜಾತ್ರೆಗೆ ಬಂದು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳುತ್ತಾರೆ.
ಈ ದೈವಸ್ಥಾನದ ಇನ್ನೊಂದು ವೈಶಿಷ್ಟ್ಯ ಎಂದರೆ ಇಲ್ಲಿ ಸಂಜೆ ಜಾತ್ರೆ. ಕಿರಿಯ ಉಳ್ಳಾಕುಲು - ಶ್ರೀ ಕಿನ್ನಿಮಾಣಿ ಅರಸು ದೈವದ ಜಾತ್ರೆ ಮೊದಲು ನಡೆದು ನಂತರ ಹಿರಿಯ ಉಳ್ಳಾಕುಲು ಶ್ರೀ ಪೂಮಾಣಿ ದೈವ ಹಾಗೂ ಮೂರು ಸಾವಿರ ಸೀಮೆಯ ಪಟ್ಟದ ದೈವವಾದ ಬೀರ್ಣಾಳ್ವನ ನೇಮ ನಡೆಯುವುದು ಅನಾದಿಕಾಲದಿಂದಲೂ ವಾಡಿಕೆ. ಜಾತ್ರೆಯ ಪ್ರತಿದಿನ ವಿಜೃಂಭಣೆಯ ನೇಮ, ಬಂಡಿ ಉತ್ಸವಗಳ ವೈವಿದ್ಯಮಯ ಕಾರ್ಯಕ್ರಮಗಳ ಐಭೋಗ. ಇಲ್ಲಿನ ಜಾತ್ರೆಗೆ ಸ್ವಲ್ಪ ಮಳೆಯಾದರೂ ಬಂದೇ ಬರುತ್ತದೆ. ಇದು ಇಲ್ಲಿನ ಕಾರಣಿಕಕ್ಕೆ ಇನ್ನೊಂದು ಸಾಕ್ಷಿಯೆಂದೇ ಹೇಳಬಹುದು.
ಅದೇನೇ ಆಗಲಿ ಅಂಬಿಲಡ್ಕ ಎಂಬ ಕ್ಷೇತ್ರ ಕುಂಬ್ಳೆ, ಆರಿಕ್ಕಾಡಿ, ಕಿದೂರು, ಬಂಬ್ರಾಣ, ಉಜಾರ್ ಉಳೂವಾರ್ ಗ್ರಾಮದ ಭಕ್ತರು ಮಾತ್ರವಲ್ಲದೆ ಹೊರಗಿನ ಊರಿನವರೂ ಕೂಡ ಭಯ ಭಕ್ತಿಯಿಂದ ನಂಬುವ ಸತ್ಯ ದೈವವಾಗಿ, ಈ ಹಿಂದೂ ಜನರು ಮಾತ್ರವಲ್ಲದೆ ಮುಸ್ಲಿಂ ಜನರೂ ಕೂಡಾ ಇಲ್ಲಿಗೆ ಬರುವುದು ಇಲ್ಲಿನ ಕಾರಣಿಕತೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಕಾರ್ಣಿಕದ ನೆಲೆಯಲ್ಲಿ ವಿರಾಜಿಸುವ ಇರುವೆರೆ ಉಳ್ಳಾಕುಲು ದೈವಗಳು, ಶ್ರೀ ಬೀರ್ಣಾಳ್ವದೈವ ಹಾಗೂ ಪರಿವಾರ ದೈವಗಳು, ಚರ್ಮದೃಷ್ಟಿಯ ಪ್ರಜಾ ಸಮುದಾಯದ ಮುಂದೆ ಮಾಯಾದೃಷ್ಟಿಯನ್ನು ಪರಿಚಯಿಸುತ್ತ ಜನರ ಸರಿ ತಪ್ಪುಗಳನ್ನು ತೂಗಿಸುತ್ತಾ ಮುನ್ನಡೆಸಿ ನಾಲ್ಕು ರಾಜ್ಯಕ್ಕೆ ಹೆಸರು ತಂದುಕೊಡುವ ಸಂಕಲ್ಪವನ್ನು ಭಕ್ತರ ಹರಕೆ, ಪೂಜೆ, ಪ್ರಾರ್ಥನೆಗಳಿಗೊಲಿದು ಸದಾ ನಂಬಿದವರನ್ನು ಕಾಯುತ್ತಾ, ಸರಿಯಾದ ಪಥದಲ್ಲಿ ಮುನ್ನಡೆಸುತ್ತಾ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡು ಬರುತ್ತಿರುವುದು ಸತ್ಯವೆಂದು ನಂಬಿದ ಭಕ್ತರ ಮಾತು.
ಅಂಬಿಲಡ್ಕ ದೈವಸ್ಥಾನ ಎಂದಿಗೂ ಕಾರ್ಣಿಕದ ನೆಲೆ. ಇಲ್ಲಿ ವಿರಾಜಿಸುವ ದೈವಗಳು, ಆರಾಧಕರ ಪಾಲಿಗೆ ದಾರಿದೀಪಗಳಾಗಿರುವುದು ಅತಿಶಯೋಕ್ತಿ ಅಲ್ಲ. ಚರಿತ್ರಯ ಪುಟಗಳಲ್ಲಿ ನಮ್ಮ ಹಿರಿಯರ ಆರಾಧನೆ-ಆಡಳಿತ-ಕಟ್ಟುಪಾಡು-ನಂಬಿಕೆ-ನಡೆಗಳು ಇಂದಿಗೂ ಜೀವಂತವಾಗಿದ್ದು, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯಕ್ಕೆ ಕಾರಣವಾಗಿರುವ ಈ ವ್ಯವಸ್ಥೆಗಳು ಜೀವಂತವಾಗಿರುವುದೇ ಅವುಗಳ ಸತ್ಯಕ್ಕೆ ಸಾಕ್ಷಿಯೆನಿಸುತ್ತದೆ.