ಶ್ರೀ ಕ್ಷೇತ್ರ ಅಂಬಿಲಡ್ಕದ ಪೂಮಾಣಿ ಕಿನ್ನಿಮಾಣಿ ದೈವಗಳು
ಅರಸು ದೈವಗಳಾದ ಪೂಮಾಣಿ ಕಿನ್ನಿಮಾಣಿ ದೈವಗಳು ಒಂದೇ ತೊಟ್ಟಿಲಲ್ಲಿ ಜನಿಸಿ ಮೇಘಲೋಕದಿಂದ ತುಳುನಾಡಿಗೆ ಬಂದರೆಂಬ ಪ್ರತೀತಿ ಇದೆ. ವೈದಿಕವಾಗಿ ಇವರು ಶ್ರೀರಾಮ ಲಕ್ಷ್ಮಣರ ಅವತಾರವೆಂದು ನಂಬುತ್ತಾರೆ. ಬೆಳ್ಳಿ ಕುದುರೆಯಲ್ಲಿ ಪಶ್ಚಿಮಘಟ್ಟದ ಮೇಲಿಂದ ಯಾತ್ರೆ ಆರಂಭಿಸಿದ ದೈವಗಳು ಘಟ್ಟ ಕುಮಾರ ಪರ್ವತ ಇಳಿದು ಬರುತ್ತಿರುವ ಸುಬ್ರಹ್ಮಣ್ಯ ದೇವರು ತಡೆಯೊಡ್ಡಿದ ಕಾರಣ ಕೋಪಗೊಂಡ ತಮ್ಮ ಕಿನ್ನಿಮಾಣಿ, ಕುಕ್ಕೆ ಕ್ಷೇತ್ರದ ಧ್ವಜಸ್ತಂಭಕ್ಕೆ ಬಾಣ ಪ್ರಯೋಗಿಸಿ ತುಂಡರಿಸಿದ್ದರಿಂದ ಅಣ್ಣ ತಮ್ಮ ದೈವಗಳಿಗೆ ಮತ್ತು ಸುಬ್ರಾಯ ದೇವರಿಗೆ ಏಳು ಹಗಲು ಮತ್ತು ಏಳು ರಾತ್ರಿ ಯುದ್ಧವು ನಡೆದು ಸುಬ್ರಾಯ ದೇವರಿಗೆ ಇವರು ದೇವಾಂಶ ಸಂಭೂತರೆಂದು ತಿಳಿದು, ರಾಜಿಯಾಗಿ, ದೈವಗಳು ಯುದ್ಧ ಮಾಡಿದ ತಪ್ಪಿಗಾಗಿ ಅನ್ನದಾನಕ್ಕೆಂದು ಹದಿನಾರು ಕೈಗಳಿರುವ ಚಿನ್ನದ ಕೊಪ್ಪರಿಗೆಯನ್ನು ಒಪ್ಪಿಸಿದ್ದಲ್ಲದೆ ತಮ್ಮ ತಂಗಿಯಾದ ದೈಯ್ಯಾರೆಯನ್ನು ಹೊಸುಗುಳಿಯಮ್ಮನಾಗಿ ಅಲ್ಲೇ ನೆಲೆಯೂರಿಸಿ, ಕುಕ್ಕೆಯಿಂದ ಹೊರಟ ಶ್ರೀ ಅರಸು ದೈವಗಳು ಸುಳ್ಯ ಸೀಮೆ ಮತ್ತು ಪುತ್ತೂರು ಏಳ್ನಾಡು ಪ್ರದೇಶಗಳಲ್ಲಿ ಹಲವಾರು ಕಾರಣಿಕಗಳನ್ನು ಪ್ರದರ್ಶಿಸಿ, ಹಲವಾರು ಕಡೆಗಳಲ್ಲಿ ನೆಲೆಯೂರಿ, ತುಳುನಾಡಿನಲ್ಲೇ ಸತ್ಯದ ಸೀಮೆ ಎಂಬ ಅಭಿಧಾನಕ್ಕೆ ಪಾತ್ರವಾದ ಕುಂಬಳೆ ಸೀಮೆಯ ಪ್ರದೇಶವಾದ ಪಡುಮಲೆಗೆ ಬಂದರು. ಅಲ್ಲಿಂದ ಮುಂದೆ ಪೂಮಾಣಿ ಕಿನ್ನಿಮಾಣಿ ದೈವಗಳು ಮೊದಲು ಅಡೂರಿನಲ್ಲಿ ಮಹಾಲಿಂಗೇಶ್ವರನಿಗೆ ಕಪ್ಪವನ್ನು ನೀಡಿ. ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟದ ದೈವವಾದ ಬಿರ್ಣಾಳ್ವ ಮತ್ತು ಧೂಮಾವತಿಯನ್ನು ಭೇಟಿಯಾಗಿ ಅವರನ್ನು ಒಲಿಸಿ, ತಮ್ಮ ಜೊತೆ ಕಾರಣಿಕ ಮೆರೆಯಲು ಜೊತೆಯಾಗಿ ಸವಾರಿ ಆರಂಭಿಸಿ ತಮ್ಮ ಯಾತ್ರೆಯ ಉದ್ದೇಶದಂತೆ "ಆದಿ ಪಡುಮಲೆ ಅಂತ್ಯ ಪುತ್ಯೆ"ಯ ಪ್ರಕಾರ ಪೈಕ, ಬೆದ್ರಡ್ಕ ಕ್ಷೇತ್ರಕ್ಕೆ ಆಗಮಿಸಿ, ಅಲ್ಲಿಯೂ ಧ್ವಜವೇರಿಸಿ, ಜಾತ್ರೋತ್ಸವ ನಡೆಸಿ, ಬೆಳ್ಳಿಯ ಕುದುರೆಯ ಮೂಲಕ ಪುತ್ತಿಗೆಗೆ ಹೋಗುತ್ತಿರಲು, ದಾರಿಯಲ್ಲಿ "ಅಂಬಿಲಡ್ಕ" ಎಂಬ ಪುರಾತನ ಧರ್ಮದ ತಾಣದಲ್ಲಿ ಕಟ್ಟೆಯನ್ನು ಕಂಡು ವಿಶ್ರಮಿಸುವರು. ಆಗ ಅಲ್ಲಿ ವಿಶ್ರಮಿಸುತ್ತಿರುವ ಈ ಇಬ್ಬರು ರಾಜಕುಮಾರರು ಮತ್ತು ಅವರ ಪರಿವಾರವನ್ನು ಬಂಬ್ರಾಣ ರಾಜಮನೆತನದ ಮಹಾಮಹಿಮರಾದ ಶ್ರೀ ಶಾಂತಾಳ್ವರು ಕಂಡು ಅತ್ಯಂತ ಆಶ್ಚರ್ಯಗೊಂಡು ಕಿದೂರು ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳಲ್ಲಿ ಕೇಳಲು, ತಂತ್ರಿಗಳು ಅವರಿಗೆ ಪೂಮಾಣಿ ಕಿನ್ನಿಮಾಣಿ ದೈವಗಳ ಇಷ್ಟ ತಿಳಿಸಲು, ಮಹಾಮಹಿಮ ಬಂಬ್ರಾಣ ಯಜಮಾನ ಶ್ರೀ ಶಾಂತಾಳ್ವರು ತಮ್ಮ ಜೊತೆಯಿದ್ದ ಗ್ರಾಮದ 7 ಪ್ರತಿಷ್ಠಿತ ಮನೆತನಗಳಾದ ಬಂಬ್ರಾಣಬೈಲು ಕಿಞ್ಞಿಣ್ಣ, ಕೆಳಗಿನ ಬೈಲು ಸಂಕರ, ನೀಲಪ್ಪಾಡಿ ಸೇಕ, ಉಜಾರು ಸಂಕಯ್ಯಾಳ್ವ, ಮುಗೇರ್ (ಕಾರ್ನಾಪ್ಪಾಡಿ) ಕೊಂಡೆ, ಕೆಳಗಿನ ಉಜಾರ್ ಸಾಂತ ಹಾಗೂ ಮುಗೇರಿನ ಸಾಂತರನ್ನು ಸೇರಿಸಿ ಅಂಬಿಲಡ್ಕದಲ್ಲಿ ಆರಾಧನೆ ಆರಂಭಿಸಿದರು. ಅಲ್ಲಿಂದ ಮುಂದೆ ಪುತ್ತಿಗೆಗೆ ಅಣ್ಣ-ತಮ್ಮ ದೈವಗಳ ಸವಾರಿ ಆರಂಭಗೊಂಡಾಗ ಪಟ್ಟದದೈವ ಬೀಣಾಳ್ವನು ಅಂಬಿಲಡ್ಕದ ಧರ್ಮದ ಮಣ್ಣಿನಲ್ಲೇ ನೆಲೆಯಾದನು ಹಾಗೂ ಧೂಮಾವತಿ ತಾಯಿಯು ಪುತ್ತಿಗೆಯ ಕಡೆಗೆ ಅಣ್ಣ ತಮ್ಮ ದೈವಗಳ ಜೊತೆ ಸವಾರಿ ಹೊರಟು ಅಂತ್ಯ ಪುತ್ತಿಗೆಯಲ್ಲಿ ನೆಲೆಯಾದರು.
ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ಕ್ಷೇತ್ರಕ್ಕೆ, ಕಿದೂರು ಶ್ರೀ ಮಹಾದೇವ ಕ್ಷೇತ್ರಕ್ಕೂ ಹಾಗೂ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ದೈವ-ದೈವಗಳ ಕ್ಷೇತ್ರ ಸಂಬಂಧ ಮಾತ್ರವಲ್ಲದೇ ಈ ಕ್ಷೇತ್ರಗಳಿಗೆ ಪರಂಪರಾಗತವಾಗಿ ಅನುವಂಶಿಕ ಮೊಕ್ತೇಸರರು ಬಂಬ್ರಾಣದ ಯಜಮಾನರೇ ಆಗಿದ್ದು. ಇಂದಿಗೂ ಕಿದೂರು ಶ್ರೀ ಮಹಾದೇವ ಕ್ಷೇತ್ರಕ್ಕೆ ವಿಶೇಷ ದಿನದ ಉತ್ಸವಗಳಲ್ಲಿ ಈ ಉಳ್ಳಾಕುಲ ಕ್ಷೇತ್ರದಿಂದ ಭಂಡಾರ ಹೋಗಿಯೇ ಆಗಬೇಕು ಹಾಗೂ ಕಿದೂರು ಕ್ಷೇತ್ರದಿಂದ ಅಂಬಿಲಡ್ಕ ಜಾತ್ರೆಯ ಸಂದರ್ಭದಲ್ಲಿ ಭಂಡಾರ ಬರುವ ಕ್ರಮ ನಡೆದುಕೊಂಡು ಬರುತ್ತಿದೆ. ಹಾಗೆಯೇ ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದ ಉತ್ಸವವು ಅನುವಂಶಿಕ ಮೊಕ್ತೇಸರರಾದಂತಹ ಬಂಬ್ರಾಣದ ಯಜಮಾನರ ಉಪಸ್ಥಿತಿಯಲ್ಲಿಯೇ ನಡೆಯುವ ಹಾಗೂ ಪಾರೆಸ್ಥಾನದ ದೈವಗಳು ಅಂಬಿಲಡ್ಕದ ದೈವಗಳನ್ನು ಅಂಬಿಲಡ್ಕದಲ್ಲಿ ಭೇಟಿಮಾಡುವ ಸಂಪ್ರದಾಯವೂ ಇದೆ.