ಸಂಪ್ರದಾಯ ಮತ್ತು ಆಚರಣೆಗಳು

ಅಂಬಿಲಡ್ಕದ ಈಗಿನ ಸಂಕೀರ್ಣ ಹೊಸತು. ಜೀರ್ಣೋದ್ಧಾರವಾಗುವ ಮುನ್ನ1824 ನೇ ಇಸವಿಯ ಹಂಚು ಇದ್ದದ್ದನ್ನು ಜನ್ರು ನೆನಪಿಸಿಕೊಳ್ಳುತ್ತಾರೆ. ಹಿಂದೆಲ್ಲ ಉತ್ಸವದ ಕಾಲದಲ್ಲಿ ಹುಲಿ ಬರುತ್ತಿದ್ದುದು ವಾಡಿಕೆ. ಅಂತಹ ಸಂದರ್ಭದಲ್ಲಿ ಒಮ್ಮೆ ಹುಲಿ ಹಿಡಿಯುವುದಕ್ಕೆಂದು ಅರಣ್ಯ ಇಲಾಖೆಯವರು ಬಂದು ಕಾದು ಕೂತರು. ಕಟ್ಟಿಹಾಕಿದ ಆಡಿನ ಆಮಿಷಕ್ಕೂ ಒಳಗಾಗದ ಮತ್ತು ಯಾರಿಗೂ ತೊಂದರೆ ಕೊಡದ ಸಾಧುಹುಲಿ ಮಾಯವಾದದ್ದು ಇಲ್ಲಿನ ಹಿರಿಯ ನಾಗರಿಕರ ನೆನಪಿನಿಂದ ಇನ್ನೂ ಮಾಸಿಹೋಗಿಲ್ಲ.

ತುಳುನಾಡ ಗತವೈಭವದಲ್ಲಿ ಉದಯವರ್ಮ ರಾಜರು ದೈವಗಳ ವಿಚಾರದಲ್ಲಿ ಸೂಚಿಸಿದಂತೆ "ಮಹಾ ಪುರುಷರ ಆತ್ಮಗಳು ತಮ್ಮ ಆರಾಧಕರ ಶ್ರೇಯಸ್ಸನ್ನು ಬಯಸುತ್ತಾ ಅವರ ಹಿತಚಿಂತಕರಾಗಿ ಅಂತರಿಕ್ಷದಲ್ಲಿ ಅಲೆದಾಡುತ್ತವೆ". ಅಡೂರು, ಮಧೂರು, ಕಾವು, ಕಣಿಯಾರ ದೇವಸ್ಥಾನಗಳ ದೇವರಿಗೆ ಸಮಾನಾಂತರವಾಗಿ ಪೈಕ, ಬೆದ್ರಡ್ಕ, ಅಂಬಿಲಡ್ಕ - ಪುತ್ತಿಗೆಗಳಲ್ಲಿ ವಿರಾಜಿಸುವ ಪೂಮಾಣಿ-ಕಿನ್ನಿಮಾಣಿ ದೈವಗಳು ಆರಾಧಕರ ಅಭಿಮಾನೀ ದಾರಿದೀಪಗಳಾಗಿರುವುದರಲ್ಲಿ ಅತಿಶಯೋಕ್ತಿ ಇಲ್ಲ.

ಚರಿತ್ರೆಯ ಪುಟಗಳಲ್ಲಿ ನಮ್ಮ ಹಿರಿಯರ ಅಥವಾ ಹಿಂದೂ ಶ್ರದ್ಧಾಳುಗಳ ಆರಾಧನೆ-ಆಚರಣೆಗಳ, ಆಡಳಿತ-ಕಟ್ಟುಪಾಡು-ನಂಬಿಕೆ-ನಡೆಗಳ ಕುರಿತ ರೋಚಕ ವಿಷಯಗಳು ಅಡಗಿವೆ. ವೈದಿಕ ವಿಧಿವಿಧಾನಗಳ ಸಹಿತ ಸರಳ ಆರಾಧನೆಗೆ ಒಳಗಾಗುವ ದೇವರೊಂದೆಡೆ. ಮನುಷ್ಯ ಸಹಜ ಮನೋವಿಕಾರ, ದುಷ್ಟ ಚಿಂತನೆಗಳನ್ನು ಒರೆಸಿ ಹಾಕುವ ಉಗ್ರದೇವತೆಗಳು ಇನ್ನೊಂದೆಡೆ. ಒಂದನ್ನೊಂದು ಆವರಿಸಿ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯಕ್ಕೆ ಕಾರಣವಾಗುವ ಈ ವ್ಯವಸ್ಥೆಗಳು ಜೀವಂತವಾಗಿರುವುದೇ ಅವುಗಳ ಸತ್ಯಕ್ಕೆ ಸಾಕ್ಷಿಯೆನಿಸುತ್ತದೆ.

ಮುದೆಲ್‍ಮುಟ್ಟಿ ಸ್ಥಾನ ಅಂಬಿಲಡ್ಕಕ್ಕೆ ಅರಸುದೈವಗಳು ಬೆದ್ರಡ್ಕ ದಾಟಿ ಬಂದವರು. ವಿಟ್ಲಸೀಮೆಯ ಕನ್ನೆರ್‌ಪಾಡಿ ಎಂಬ ಪೇರೂರಿನಲ್ಲಿ ಮೊದಲು ಕೂತ ದೈವಗಳು ಪೈವಳಿಕೆಯಲ್ಲಿ ಉಳ್ಳಾಲ್ತಿ ಇದ್ದದ್ದರಿಂದ ಅಂಬಿಲಡ್ಕದ ಹತ್ತಿರ ಬಂದರು. ಇದೇ ಸಂದರ್ಭದಲ್ಲಿ ಪಾಂಡ್ಯಡ್ಕದ ಎರ್ಪೆಕಟ್ಟೆ ಹತ್ತಿರ ದೈವಗಳು ನೆಲೆಯೂರಿದ್ದ ಕುರುಹು ಕಾಣಿಸುತ್ತದೆ ಎಂದೂ ಪ್ರತೀತಿ ಇದೆ. (ಗುಡಿಗೋಪುರಗಳು ಈಗ ಜೀರ್ಣಾವಸ್ಥೆಯಲ್ಲಿದ್ದರೂ ಇತ್ತೀಚಿನ ತನಕ ಅಲ್ಲಿ ದೈವದ ಗದೆ, ಬಿಲ್ಲು ಬಾಣಗಳು ಇದ್ದುವು. ಪಾಂಡ್ಯಡ್ಕ ಭಂಡಾರಕೊಟ್ಟಿಗೆಯಿಂದ ಮುಂಡಾಳ್ತಾಯ ಕೀರ್ವಾಳು ಹೋಗಿ ಹಿಂದೆಲ್ಲ ಅಲ್ಲಿ ಜಾತ್ರೆ ನಡೆಯುತ್ತಿತ್ತು) ಮುಂದೆ ದೈವಗಳು ಈಗಿನ ಭಂಡಾರಕೊಟ್ಟಿಗೆ ಇರುವ ಬೆಜಪ್ಪೆಯಲ್ಲಿ ಹೆಬ್ಬಾರ ಸ್ತ್ರೀಯೊಬ್ಬರಿಗೆ ಪ್ರತ್ಯಕ್ಷವಾಗಿ ಅಲ್ಲಿ ದೊಡ್ಡ ಕಲ್ಲ ಮೇಲೆ ಕುಳಿತ ಐತಿಹ್ಯವಿದೆ. ಸ್ಥಳಾವಕಾಶ ಅಲ್ಲಿ ಕಡಿಮೆ - ಆದರಿಂದ ಸ್ಥಾನವನ್ನು ಈಗಿನ ಅಂಬಿಲಡ್ಕದಲ್ಲಿ ನಿರ್ಮಿಸಲಾಯಿತು.

ಭಂಡಾರ ಮನೆ

ದೈವಸ್ಥಾನ ಇಲ್ಲವೇ ದೇವಸ್ಥಾನಗಳ ಕಾರ್ಯ ಪ್ರಣಾಳಿಯಲ್ಲಿ ಭಂಡಾರ ಮುಖ್ಯ ಪಾತ್ರ ವಹಿಸುತ್ತದೆ. ಅದಕ್ಕೆ ಭಂಡಾರ ಮನೆಯೊಂದು ಅವುಗಳ ಸುತ್ತಳತೆಯಲ್ಲಿ ಇದ್ದೇ ಇರುತ್ತದೆ. ಅಂಬಿಲಡ್ಕಕ್ಕೆ ಭಂಡಾರ ಮನೆ ಅದರ ಮೂಡು ಪಾರ್ಶ್ವದಲ್ಲಿ ಸುಮಾರು ಅರ್ಧ ಮೈಲು ದೂರದಲ್ಲಿದೆ. ಜಾತ್ರೆಗೆ ಮೊದಲು ಅಂದರೆ ಸುಗ್ಗಿ 21 ರಂದು ಮಾಗಣೆಯವರು ತಂತ್ರಿಗಳ ಮೂಲಕ ಪ್ರಾರ್ಥನೆ ಸಲ್ಲಿಸಿ ಭಂಡಾರ ಮನೆಗೆ ಹೋಗಿ ಅಲ್ಲಿಂದ ವಾದ್ಯಘೋಷಗಳೊಂದಿಗೆ ಕೀರ್ವಾಳು ತರಲಿಕ್ಕಿದೆ. ಅಲ್ಲಿ ಸಂಬಂಧಪಟ್ಟವರಿಗೆ ಮನೆಯ ಯಜಮಾನರು ಎಣ್ಣೆಬೂಳ್ಯ ಕೊಡುತ್ತಾರೆ. ಮತ್ತೆ ಬನದ ಪಕ್ಕದ ಉಳ್ಳಾಕುಲು ಕೆದು (ಕೆರೆ)ಯ ಸ್ನಾನ ಮುಗಿಸಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಕೀರ್ವಾಳು ತೆಗೆಯುವುದು ರೂಢಿ. ಅವಳಿ ದೈವದ ಪಟ್ಟದಾಯುಧ, ದೈವಗಳ ಇತರ ಆಯುಧಗಳು, ಮೊಗ ಮತ್ತು ಬಿಲ್ಲುಬಾಣಗಳನ್ನು ಭಂಡಾರ ಮನೆಯಿಂದ ತರಬೇಕು. ಮುಂದೆ ಬರುತ್ತ ಸ್ಥಾನದ ಅರ್ಧ ಕಿ.ಮೀ. ಮೂಡುಭಾಗದಲ್ಲಿ ಕಿದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಂಡಾರದೊಂದಿಗೆ ಭೇಟಿ ಆಗುತ್ತದೆ. ಆನಂತರ ಭಂಡಾರ ಮನೆಯ ಮೊದಲ ತೋರಣದಿಂದ ಹಿಡಿದು ಒಟ್ಟು 14 ತೋರಣಗಳ ಮುಖಾಂತರ ಭಂಡಾರವು ಸಾಗಬೇಕು.

ಇದೇ ರೀತಿ ಕಿದೂರು ದೇವಾಲಯಕ್ಕೂ ಷಷ್ಠಿ ಮತ್ತು ಮಹಾಶಿವರಾತ್ರಿ ಸಂದರ್ಭ ಪೂಮಾಣಿ-ಕಿನ್ನಿಮಾಣಿ ದೈವಗಳ ಆಯುಧವನ್ನು ಭಂಡಾರ ಮನೆಯವರೇ ಕೊಂಡು ಹೋಗುತ್ತಾರೆ. ಮಹಾಲಿಂಗೇಶ್ವರನ ಗಂಧ-ಪ್ರಸಾದವನ್ನು ಪಟ್ಟದ ಆಯುಧವನ್ನು ಹಿಡಿದುಕೊಂಡೇ ಅವರು ದೈವಗಳ ಪರವಾಗಿ ಸ್ವೀಕರಿಸುತ್ತಾರೆ.

ಆಡಳಿತ, ಲೆಪ್ಪುಕ್ರಮ

ಗ್ರಾಮದೈವ - ಮಾಗಣೆದೈವ - ಸೀಮೆದೈವ ಮುಂತಾದ ವಿಭಜನೆ ಇಲ್ಲಿ ಗಮನಾರ್ಹ. ಇದರಲ್ಲಿ ಸೀಮೆ ದೈವವೆನಿಸಿದ ಪೂಮಾಣಿ-ಕಿನ್ನಿಮಾಣಿ ದೈವಗಳು ಅಸಮ ಶೂರರು.

ನಮ್ಮ ಸಂಸ್ಕೃತಿಯ ಬೇರು ಚರಿತ್ರೆಯ ಭೂಮಿಕೆಯಲ್ಲಿ ಹರಡಿದೆ. ಹಾಗಾಗಿ ಸಾಂಸ್ಕೃತಿಕ ಚರಿತ್ರೆಯ ಪೂರ್ವಿಕರ ಸ್ಥಾನ ಮಹತ್ತರವಾದ್ದು. ಅಂಬಿಲಡ್ಕದ ಅರಸು ದೈವಗಳು ಅಣಿಕಟ್ಟಿ ಪೀಠದಲ್ಲಿ ಸುಖ ವಿಶ್ರಾಂತಿ ಹೊಂದಿ ಕರೆಯುವುದು ಕಿನ್ನಾಳ್ವಾ, ಶಾಂತಾಳ್ವಾ ಎಂದು.

ಅವರು ಇವತ್ತಿನವರಲ್ಲ. ಹಿಂದಿನ ಕಾಲದ ವೈಭವದ ದಿನಗಳಲ್ಲಿ ಹಿರಿಯ ಮನೆತನದ ಯಜಮಾನ ಅವರು. ಇಡಿಯ ನಾಡಿಗೆ ರಕ್ಷಣೆ ಒದಗಿಸಬಲ್ಲ ಭರವಸೆಯ ಶೂರ ಬಂಟ ಸಮುದಾಯದ ನಾಯಕರು. ಹೀಗೆ ನೆನಪಿಸಿಕೊಳ್ಳುವುದು ನಮ್ಮ ಋಣಪ್ರಜ್ಞೆಗೂ ಸಲ್ಲುವಂಥದ್ದು.

ಬಂಬ್ರಾಣದ ವಿಸ್ತಾರವಾದ ಬಯಲಿಗೆ ಮುಖ ಮಾಡಿದ ಬೃಹತ್ ಮನೆ ಈಗಿನ ಯಜಮಾನರ ಸುಪರ್ದಿಗೆ ಸೇರಿದ್ದು. ಇಲ್ಲಿಂದ ಹಿಂದಕ್ಕೆ ಯಜಮಾನರ ಪರಂಪರೆ ಸರಿಯುತ್ತದೆ. 150 ವರ್ಷಗಳ ಹಿಂದೆ ಕಟ್ಟಿಸಿದ ಈ ಮಾಳಿಗೆಗಳ ಮನೆ ಬಂಬ್ರಾಣ ಚಿಕ್ಕಪ್ಪು ನಾಯಕರ ಕಾಲದಲ್ಲಿ ನಿರ್ಮಾಣಗೊಂಡದ್ದು.

ಅನಂತರದ ಹೆಸರುಗಳು ಕ್ರಮವಾಗಿ ಯೆಂಕಪ್ಪ ಪೂಂಜ (ಮದನ ನಾಯಕ), ಕೋಚಣ್ಣ ಆಳ್ವ (ವಿಶ್ವನಾಥ ಆಳ್ವರ ತಾಯಿಯ ಸೋದರ), ಮಂಗಲ್ಪಾಡಿ ತ್ಯಾಂಪಣ್ಣ ಶೆಟ್ಟಿ, ನಾರಾಯಣ ಪೂಂಜ, ಮೂರು ವರ್ಷದ ಯಜಮಾನಿಕೆ ನೋಡಿದ ಸುಬ್ಬಣ್ಣ ಆಳ್ವ, ಹನ್ನೆರಡು ವರ್ಷ ವಹಿಸಿದ ಸಂಕರ ಆಳ್ವ, ಸಿರಿಬಾಗಿಲು ಶಂಕ್ರಾಳ್ವ, ತಿಮ್ಮಣ್ಣಾಳ್ವ ಮತ್ತು ಈಗ ವಿಶ್ವನಾಥ ಆಳ್ವರು. ಅಂಬಿಲಡ್ಕದ ದೈವಗಳ ಹೆಸರಲ್ಲಿ ಇರುವ ವಿಶಾಲ ಭೂ ಪ್ರದೇಶ ದಾಖಲೆಗಳನ್ನು ನವೀಕರಿಸಿದ್ದು. ಸುಬ್ಬಣ್ಣ ಆಳ್ವರ ಕಾಲದಲ್ಲಿ, ಬಾಲಕೃಷ್ಣ ಅಡ್ಯಂತಾಯರ ನೇತೃತ್ವದಲ್ಲಿ ತಂಡವು ಈ ವಿಷಯದಲ್ಲಿ ತುಂಬಾ ದುಡಿದಿರುವುದನ್ನು ಸ್ಮರಿಸಲೇ ಬೇಕು.

ಗುರಿಕ್ಕಾರರು

ಊರಿನ ಗುರಿಕ್ಕಾರದ್ದೂ ಅಂಬಿಲಡ್ಕದಲ್ಲಿ ಒಂದು ಮಹತ್ವದ ಸ್ಥಾನ. ಇದು ಬಂಬ್ರಾಣದ ಕೆಳಗಿನ ಮನೆಯವರಿಗೆ ಸೀಮಿತ. ಗುರಿಕ್ಕಾರನು ಬಂಬ್ರಾಣ ಯಜಮಾನರ ಪ್ರತಿನಿಧಿಯಾಗಿ ಅವರ ಅನುಪಸ್ಥಿತಿಯಲ್ಲಿಯೂ, ಊರಿನ ಎಲ್ಲಾ ಶುಭ ಸಮಾರಂಭಗಳಲ್ಲಿಯೂ ದೈವಕೋಲಗಳ ವೇಳೆಯಲ್ಲಿಯೂ ಹಾಜರಿರಬೇಕೆಂಬ ನಿಯಮವಿದೆ.

ಜಾತ್ರೆ - ಆರಾಧನೆ ಮತ್ತಿತರ ವಿಧಿಗಳು

"ಒಂಜಪ್ಪೆ ಬಾಲೆಲೆ ಲೆಕ್ಕೊ ರಾಜಾಂಗಣೊಡ್ ಓಲಸರಿ ಪಡೆವೊಂದ್" ಈ ದೈವಗಳು ಕೂಡಿದ ಸಭೆಯೊಂದಿಗೆ ಮಾತನಾಡುತ್ತವೆ. ಚರ್ಮದೃಷ್ಟಿಯ ಪ್ರಜಾ ಸಮುದಾಯದ ಮುಂದೆ ಮಾಯಾದೃಷ್ಟಿಯ ತಮ್ಮನ್ನು ಪರಿಚಯಿಸುತ್ತ ನಡತೆಯಲ್ಲಿ ಹೆಚ್ಚುಕಮ್ಮಿ ಇರಬಹುದಾದ ಜನರನ್ನು ಮುನ್ನಡೆಸಿ ನಾಲ್ಕು ರಾಜ್ಯಕ್ಕೆ ಹೆಸರು ತಂದುಕೊಡುವ ಸಂಕಲ್ಪವನ್ನು ಸಾಂತಾಳ್ವನಲ್ಲಿ ಬಿಚ್ಚಿಕೊಳ್ಳುವ ದೈವಗಳು ಇಡೀ ಅಂಬಿಲಡ್ಕದ ಭಕ್ತ ಸಮೂಹವನ್ನು ಮೋಡಿಮಾಡುತ್ತವೆ.

ಈ ದೈವಗಳಿಂದ ಬೂಳ್ಯ ಪಡೆಯುವ ನಿರೀಕ್ಷೆಯಿಂದ ಎಲ್ಲೆಲ್ಲೋ ಚದುರಿಹೋದ ಬಂಬ್ರಾಣ ನಿವಾಸಿಗಳು, ಅವರ ಬಂಧುಗಳು, ಊರಪರವೂರ ಭಕ್ತಾಭಿಮಾನಿಗಳು ಅಲ್ಲಿನೆರೆದಿರುತ್ತಾರೆ. ಹಾಗೆ ಆ ಐದು ದಿನಗಳ ಜಾತ್ರೆಯ ಮೂರೂ ದಿನಗಳಲ್ಲಿ ಮುಖ್ಯ ಕಾರ್ಯಕ್ರಮಗಳು ಹರಡಿಕೊಂಡಿರುತ್ತವೆ. ಇಡೀ ಜನ ಸಮೂಹ ಜಾತಿ ಮತ, ಹಿರಿಯ ಕಿರಿಯ ಬೇಧಗಳಿಲ್ಲದೆ ಬೆರೆತು ಕೃತಾರ್ಥರಾಗುವ ಆ ನಿಮಿಷಗಳು ಇವತ್ತಿಗೂ ದೈವಾರಾಧನೆಯ ಮೇಲ್ಮೆಯನ್ನು ಸಾರುತ್ತವೆ.

ದೈವಾರಾಧನೆಯಲ್ಲಿ ಕಾಲಾಂತರದಿಂದ ಬಂದ ಯಾವುದೇ ಕಟ್ಟುಗಳನ್ನು ಮೀರುವಂತಿಲ್ಲ. ಅದಕ್ಕೆ ಎಂಟು + ನಾಲ್ಕು = ಹನ್ನೆರಡು ಮನೆಯವರು, ಆಡಳಿತದವರು, ಸೇವೆ ನೀಡುವವರು, ಚಾಕರಿ ವರ್ಗದವರು, ಅಪ್ಪಣೆ ಕೊಡುವ ತಂತ್ರಿಯವರಿಂದ ಹಿಡಿದು ಅರ್ಚಕರ ವರೆಗೆ ಆರಾಧನೆಯ ಪಾಳಿಯನ್ನು ನಿರ್ವಹಿಸುತ್ತಾರೆ.

ಮಾಣಿ ಮತ್ತು ಪಾತ್ರಿ

ಬಬ್ಬರ್ಯ ದೈವಕ್ಕೆ ಬೆಳ್ಚಪ್ಪಾಡ ಪಾತ್ರಿ. ಆದರೆ ಅರಸು ದೈವಗಳಿಗೆ ಪಾತ್ರಿಗಳು ಬಂಟ ಸಮುದಾಯದವರು. ಕೀರ್ವಾಳು ಬರುವಾಗಲೂ ಇಳಿವಾಗಲೂ ಪಾತ್ರಿ ಮತ್ತು ಮಾಣಿ, ಆಯುಧಗಳನ್ನು ಹಿಡಿದು ದರ್ಶನವಾಗುವುದು ವಾಡಿಕೆ.

ಅಂಬಿಲಡ್ಕದಲ್ಲಿ ದೈವಾರಾಧನೆ ಕೀರ್ವಾಳು ಬರುವ ರಾತ್ರಿ ಕಳೆದು ಮರುದಿನದಿಂದ ಹಗಲಲ್ಲೇ ನಡೆಯುವುದು ವಿಶೇಷ. ಇದು ಕಿನ್ನಿಮಾಣಿ-ಪೂಮಾಣಿ ದೈವಗಳಿಗೆ ಸಂಬಂಧಪಟ್ಟು ಎಲ್ಲ ಕಡೆ ಒಂದೇ ವಿಶೇಷವೆಂದರೆ ಅರಸು ದೈವಗಳ ಆರಾಧನೆ ನಡೆಯುವಲ್ಲೆಲ್ಲ ತಮ್ಮನಿಗೆ ಮೊದಲು, ಅಣ್ಣನಿಗೆ ಆನಂತರ ಎನ್ನುವುದು ಕ್ರಮ. ಉದಾಹರಣೆಗೆ ಕುಂಜತ್ತೂರು ಉದ್ಯಾವರ ಮಾಡದ ಅರಸು ಮಂಜಿಷ್ಣಾರ್ ದೈವಗಳಿಗೆ ಸಂಬಂಧಿಸಿ ನೋಡಬಹುದು. ಅಲ್ಲೊಮ್ಮೆ ಮೊದಲು ತಮ್ಮನಿಗೆ ನೇಮ ಕೊಡದೆ ಅಣ್ಣನಿಗೆ ಕೊಡಹೋದಾಗ ಏನೇನು ಮಾಡಿಯೂ ಬಂಡಿಯೇ ಅಲುಗಾಡಲಿಲ್ಲವಂತೆ.

ಅಂಬಿಲಡ್ಕದಲ್ಲಿ ದೈವಾರಾಧನೆಯ ಹಂತಗಳನ್ನು ಶ್ರೀ ನವೀನ್ ಕುಮಾರ್ ತಮ್ಮ ಪೂಮಾಣಿ ಕಿನ್ನಿಮಾಣಿ ಸಂಪ್ರಬಂಧದಲ್ಲಿ ಗುರುತಿಸಿಕೊಂಡಂತೆ ಹೀಗೆ ದಾಖಲಿಸಬಹುದು. 11 ದಿನ ಮೊದಲು ಕೋಳಿಕುಂಟ. ಅದಾಗಿ ಕೆಲವು ನಿಬಂಧನೆಗಳನ್ನು ಅನುಸರಿಸುವುದು. ಇದರಂತೆ ಜಾತ್ರೋತ್ಸವ ಮುಗಿಯುವ ವರೆಗೆ ಯಾವುದೇ ಮಂಗಳ ಕಾರ್ಯಗಳನ್ನು ನಡೆಸದಿರುವುದು ಅಲ್ಲದೆ ಕೀರೋಳು ಬಂದು ಮೇಲೆ ಪರವೂರಿಗೆ ಹೋಗಿ ತಂಗದಿರುವುದು.

ಪ್ರಮುಖ ಕಾರ್ಯಕ್ರಮ ಕೋಳಿಗುಂಟ. ಆಮೇಲೆ ಕೀರ್ವಾಳು ಬರುವುದು. ಮತ್ತೆ ತಂತ್ರಿಗಳಿಂದ ಕೂಡು ತಂಬಿಲ. ಅದಾಗಿ ಪಾತ್ರಿಗೆ ಬೂಳ್ಯ ಪ್ರದಾನ. ಕೀರ್ವಾಳು ಬಂದ ಮರುದಿನ ಸಂಬಂಧಪಟ್ಟ ಚಾಕರಿಯವರಿಗೆ ಎಣ್ಣೆ ಬೂಳ್ಯ ಪ್ರದಾನ ಬಳಿಕ ಸಂಬಂಧ ಪಟ್ಟವರು ಸ್ನಾನಾದಿ ವಿಧಿಗಳನ್ನು ನಡೆಸಿ ಪಾತ್ರಿ ಬಣ್ಣ ಹಚ್ಚಿ, ವೇಷಭೂಷಣ ತೊಟ್ಟು ಆರಾಧನೆಗೆ ಸಿದ್ಧನಾಗುವುದು. ಮುಡಿ ಇಡುವ ಕಲ್ಲಿನ ಬಳಿ ತೆರಳಿ ದೈವ ಕುಳಿತುಕೊಳ್ಳುತ್ತದೆ. ದೈವಕ್ಕೆ ಅಣಿ ಕಟ್ಟಿ ಪೂ - ಆರಿ ಹಾಕಿದಾಗ ಆವೇಶ ಬಂದು ನರ್ತನೋತ್ಸವಕ್ಕೆ ಸಿದ್ಧವಾಗುವುದು. ಮುಂದೆ ಬಂಡಿ ಸವಾರಿ ನಡೆಸಿ ಓಲಸೆರಿ ಮುಗಿಸಿ ಭಕ್ತರಿಗೆ ಅಭಯ ನೀಡುವಲ್ಲಿಗೆ ಬೂಳ್ಯ ನೀಡುವ ಸಮಯವಾಗುತ್ತದೆ. ಮೊದಲಿನ ದಿನದಂದು ನಡೆದಂತೆ ನಡು ಉತ್ಸವದಂದು ಕುದುರೆ ಸವಾರಿ ನಡೆಸಿ ಓಲೆಸರಿ ಮುಗಿಸಿದ ನಂತರ ದೈವಸ್ಥಾನದ ಮುಖ್ಯ ನಡೆಯಲ್ಲಿ ಬಂಬ್ರಾಣ ಕೊಟ್ಯದ ಮನೆ ದೂಮಾವತಿ ದೈವದ ಪೂಜಾರಿಗೆ ಆವೇಶ ಬಂದು ತಮ್ಮೊಳಗೆ ಭೇಟಿಯಾಗುತ್ತದೆ. ಇದಾದ ನಂತರ ಪಾರೆಸ್ಥಾನದಿಂದ ಐವರು ಬೆಳ್ಚಪ್ಪಾಡರು ಆವೇಶದಲ್ಲಿ ಅಂಬಿಲಡ್ಕ ಪ್ರಧಾನ ನಡೆಯಲ್ಲಿ ದೈವದೊಂದಿಗೆ ಭೇಟಿಯಾಗುವುದು ರೂಢಿ. ಆಮೇಲೆ ಪ್ರಸಾದ ವಿತರಣೆ.

ಮೇಲೆ ಹೇಳಿದಂತೆಯೇ ಜಾತ್ರೆಯ ನಾಲ್ಕನೇ ದಿನ ಬೀರ್ನಾಳ್ವ ದೈವವು ಹಂದಿ ಸವಾರಿ ನಡೆಸಿ ಓಲೆಸರಿ ಮುಗಿಸಿ ನಂತರ ಪ್ರಸಾದ ವಿತರಣೆಯಾಗುವುದು. ಆಮೇಲೆ ಕಟ್ಟಿದ ಕೋಲದಲ್ಲಿ ಇತರ ಪರಿವಾರ ದೈವಗಳಾದ ಬಬ್ಬರ್ಯ, ಪಿಲಿ ಚಾಮುಂಡಿ, ಭಂಡಾರಿ, ಪೊಟ್ಟ ಭೂತ ಮುಂತಾದ ಪರಿವಾರ ದೈವಗಳ ಆರಾಧನೆಯೂ ನಡೆಯುತ್ತದೆ. ಜಾತ್ರೆಯ ಕೊನೆಯ ಅಂದರೆ ಐದನೇ ದಿನ ಬೀರ ತಂಬಿಲ ಮತ್ತು ಕೀರ್ವಾಳು ಇಳಿಯುವುದು. ಅದಾದ ನಂತರ ಕೋಳಿಕುಂಟ ಯಜಮಾನರಿಂದ ತೆಗೆಯಲ್ಪಡುತ್ತದೆ.

ಅಯ್ಯಂಗಾಯಿ

ಅಯ್ಯಂಗಾಯಿ ಕಲ್ಲಿಗೆ ತೆಂಗಿನಕಾಯಿ ಹೊಡೆಯುವ ರೂಢಿ ಒಂದು ಬಗೆಯ ಅದೃಷ್ಟ ಪರೀಕ್ಷೆಯಂಥ ಕಾರ್ಯಕ್ರಮ. ಈ ಕಲ್ಲು ಪ್ರಧಾನ ದೈವದ ಗುಡಿಯ ಬಲಭಾಗದಲ್ಲಿದೆ. ಕೀರೋಳು ಬರುವ ದಿನ, ಜಾತ್ರೆ ಸಮಯದಲ್ಲಿ ತಂತ್ರಿಗಳು, ಭಂಡಾರ ಮನೆಯವರು ಮತ್ತು ವಾಡಿಕೆಯ ಮನೆತನಗಳವರು ಇದರಲ್ಲಿ ಪಾಲ್ಗೊಳ್ಳುವುದು ರೂಢಿ. ಇಚ್ಲಂಪಾಡಿ, ಕೊಡ್ಯಮೆ ಇರ್ನೀರಾಯ, ಬಂಬ್ರಾಣ, ಕಾರಿಂಜ, ಕಿದೂರು, ಕೋಟೆಕಾರು - ಮಾಗಣೆಯವರು. ಗ್ರಾಮದವರಾಗಿ ಬಂಬ್ರಾಣ ಬೈಲು, ಕೆಳಗಿನ ಬೈಲು, ನೀಲಪ್ಪಾಡಿ, ಊಜಾರು, ಕೆಳಗಿನ ಊಜಾರು, ಮುಗೇರು, ನೀಲಪ್ಪಾಡಿ ಮತ್ತು ಮಾಕೂರು ಇದರಲ್ಲಿ ಭಾಗವಹಿಸುವವರು. ಆರಾಟು ತಂಬಿಲದ ದಿನ, ಕೀರೋಳು ಬರುವ ದಿನ ಪರ್ಬತಂಬಿಲಕ್ಕೆ, 12 ಸಂಕ್ರಾಂತಿಗಳಿಗೆ ಕೂಡಾ ಅಯ್ಯಂಕಾಯಿ ಸಂಪ್ರದಾಯ ಇದೆ. ಈ ಸಂದರ್ಭಗಳಲ್ಲೆಲ್ಲ ಭಂಡಾರ ಮನೆಯವರೂ, ತಂತ್ರಿಗಳು ಬಂದಿಲ್ಲವಾದರೆ, ಅರ್ಚಕರೂ ಭಾಗವಹಿಸುತ್ತಾರೆ.

ಪರ್ವಗಳು: ಪಾನಿಯಾರ

ಪಾನಿಯಾರದಲ್ಲಿ ಬೆಲ್ಲ, ಬಾಳೆಹಣ್ಣು, ಸೀಯಾಳ, ಅವಲಕ್ಕಿ ಹಾಗೂ ಅರಳು ಇರುತ್ತದೆ. ಬಾಳೆ ಎಲೆಯಲ್ಲಿ ಬಡಸಿ ಅರ್ಪಿಸುವ ಈ ಕ್ರಮದಲ್ಲಿ ಇತರ ಕಡೆಗಳಲ್ಲಿಯೂ ಪಂಚಕಜ್ಜಾಯ, ಬಾಳೆಹಣ್ಣು, ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ಬೆಲ್ಲಗಳಿರುವುದು ಸಾಮಾನ್ಯ.

ಸೀಯಾಳ

ಸೀಯಾಳವಂತೂ ಎಲ್ಲ ವಿಧಿ ವಿಧಾನಗಳಲ್ಲಿ ಮುಖ್ಯ. ಕೀರೋಳು ಬರುವ ದಿನ, ಒಳ ಹೊರಗಾಗಿ ಹದಿನಾರರಂತೆ, ಮರುದಿನ 40 ಹೊರೆಗೆ, 16 ಒಳಗೆ ಮತ್ತು 2 ಅಯ್ಯಂಗಾಯಿಗೆ. ನಡು ನೇಮಕ್ಕೆ 60 ಹೊರಗೆ, 16 ಒಳಗೆ, 2 ಅಯ್ಯಂಗಾಯಿಗೆ, ಕೊನೆ ದಿನ 60 ಹೊರಗೆ, 150 ಒಳಗೆ ಮತ್ತು 16 ಅಯ್ಯಂಗಾಯಿಗೆ. ದೀಪಾವಳಿಗೆ 34 ಒಳಗೆ, 16 ಅಯ್ಯಂಗಾಯಿಗೆ. ಮರುದಿನ 20 ಪನಿಯಾರ, 2 ಅಯ್ಯಂಗಾಯಿಗೆ. ಪತ್ತನಾಜೆಗೆ ಒಳಹೊರಗೆ 16 ರಂತೆ ಹೀಗೆ ರೂಢಿ ಪಾಲಿಸಲ್ಪಡುತ್ತದೆ.

ತೋರಣ

ಕೀರೋಳು ತರುವ ದಿನ ನಿರ್ಮಾಣಗೊಂಡಿರುವ ತೋರಣಗಳ ಚಂದ ನೋಡಬೇಕಾದ್ದೆ. ಒಟ್ಟು 14 ತೋರಣಗಳಿರುತ್ತವೆ. ಭಂಡಾರ ಮನೆ, ಕೊಡ್ವೆ, ಕಾರ್ಲೆ, ಊಜಾರು, ಕೆಳಗಿನ ಊಜಾರು, ಊಜಾರು ಬೈಲು, ಮಾಕೂರು, ಮುಗೇರು, ಸಣ್ಣ ನೀಲಪ್ಪಾಡಿ, ದೊಡ್ಡ ನೀಲಪ್ಪಾಡಿ, ಬಂಬ್ರಾಣ - ಹೀಗೆ ಸೇವಾರೂಪದಲ್ಲಿ ಅವರವರಿಂದ ಈ ತೋರಣಗಳ ನಿರ್ಮಾಣ ನಡೆಯುತ್ತದೆ.

ಕೋಳಿ ಗುಂಟ

ಭೂತಾರಾಧನೆಗೆ ಸಂಬಂಧಿಸಿದ ಆಚರಣೆಗಳನ್ನು ಆರಂಭಿಸುವಲ್ಲಿ ಮೊದಲ ಕಾರ್ಯಕ್ರಮ ಕೋಳಿಗುಂಟ. ತಂತ್ರಿಗಳು ಇದಕ್ಕೆ ಸ್ಥಳವನ್ನೂ ಮುಹೂರ್ತವನ್ನೂ ಹೇಳುತ್ತಾರೆ. ಅಂಬಿಲಡ್ಕದಲ್ಲಿ ಭದ್ರಕಾಳಿಯ ನೆಲೆಯ ಪಕ್ಕದಲ್ಲಿ ಕೋಳಿಗುಂಟ ಹಾಕುವುದು ವಾಡಿಕೆ. ಗೂಟಕ್ಕೆ ಹಾಲು ಬರುವ ಮರವೇ ಆಗಬೇಕು. ಕೋಳಿಕಟ್ಟ ಮತ್ತು ಭೂತಕ್ಕೆ ಕೋಳಿಯನ್ನು ಬಲಿಕೊಡುವ ಪ್ರಕ್ರಿಯೆಗಳು ಪರಸ್ಪರ ಸಂಬಂಧ ಹೊಂದಿರುವುದು ಸ್ಪಷ್ಟ.

ಅಂಬಿಲಡ್ಕಕ್ಕೆ ಸಂಬಂಧಿಸಿದ ಐತಿಹ್ಯಗಳು ನರಬಲಿ ಮತ್ತು ಕೋಳಿ ಬಲಿಗಳೊಳಗಿನ ಸಂಬಂಧವನ್ನು ಸ್ವಾರಸ್ಯಕರವಾಗಿ ನೆನಪಿಸುತ್ತವೆ. ಜನಜನಿತವಾದ ಇಂತಹ ಹಿನ್ನಲೆಯನ್ನು ಸ್ಥಳೀಯ ಶ್ರೀ ಅಮ್ಮು ಶೆಟ್ಟಿ ಅವರ ನಿರೂಪಣೆ ಮತ್ತಿತರ ಹೇಳಿಕೆಗಳಿಂದ ಹೀಗೆ ದಾಖಲಿಸಬಹುದು.

ಅಂಬಿಲಡ್ಕದ ಪರಿಸರದಲ್ಲಿ ಪುಟ್ಟ ಗುಡ್ಡದ ಮೇಲೆ ದಿನ್ನೆಯಂತಹ ಪ್ರದೇಶದಲ್ಲಿ ಮಾಕೂರು ಎಂಬ ಹೆಸರಿನಿಂದ ಗುರುತಿಸಲ್ಪಡುವ ಒಂದು ದಟ್ಟ ಬನ ಇದೆ. ಪೂಮಾಣಿ-ಕಿನ್ನಿಮಾಣಿ ಅಲ್ಲಿಗೆ ಹೋದಾಗ ಅಲ್ಲಿ ಬೊಬ್ಬರ್ಯ ದಾರಿಗೆ ಅಡ್ಡವಾಗಿ ನಿಂತಿಕೊಂಡಿದ್ದ. ಅರಸು ದೈವಗಳು ಬೊಬ್ಬರ್ಯನನ್ನು ಹೀಗೆ ಮಾತನಾಡಿಸಿದವು - "ನೀನು ಯಾರಪ್ಪ, ಇಲ್ಲಿ ನರಬಲಿ ಆಗುವ ಜಾಗ ಗೊತ್ತಾ ನಿನಗೆ?"

"ಗೊತ್ತು"

"ಹಾಗಿದ್ದರೆ ಕುದುರೆ ಮೇಲೇರು"

"ಸ್ವಾಮಿ ಮಹಾಲಿಂಗನ ಅಪ್ಪಣೆಯ ವಿನಹ ಮಾತನಾಡಲಾರೆ"

"ಹತ್ತಿಕೋ ಸ್ವಾಮಿಯನ್ನೇ ಭೇಟಿಯಾಗೋಣ"

ಮೂವರು ಕಿದೂರು ಮಹಾಲಿಂಗೇಶ್ವರನಲ್ಲಿಗೆ ಹೋದರು. ಮಹಾಲಿಂಗೇಶ್ವರ ಪ್ರತ್ಯಕ್ಷಗೊಂಡು ಮನ್ನಣೆ ನೀಡಿ ಆಗಮನದ ಉದ್ದೇಶವನ್ನು ಕೇಳಿದಾಗ ದೈವಗಳು ನಿವೇದನೆ ಮಾಡಿಕೊಂಡವು -

"ಮಾಕೂರುನಲ್ಲಿ ನರಬಲಿ ನಡೆಯುತ್ತಿದೆಯಂತೆ ಅದನ್ನು ನಿಲ್ಲಿಸಬೇಕೆಂಬ ಆಸೆ ತೊಟ್ಟಿದ್ದೇವೆ ನಾವು"

"ಹಾಗೆ ಮಾಡಬೇಕಿದ್ದರೆ ಮೊದಲು ಮಹಾಕಾಳಿಯ ಬಾಯಿಗೆ ಬೀಗ ಹಾಕಿ, ಐವರು ದೈವಂಗಳನ್ನು ಓಡಿಸಿ. ಭದ್ರಕಾಳಿಯನ್ನು ತಂದು ಕಾಲಬುಡದಲ್ಲಿ ಸ್ಥಾಪಿಸಿಕೊಳ್ಳಿ"

ಹೀಗೆ ಕಿದೂರಿನ ಮಹಾಲಿಂಗೇಶ್ವರನೊಂದಿಗೆ ನಡೆಸಿದ ಒಪ್ಪಂದದ ನಂತರ ದೇವಾಲಯದ ಪಶ್ಚಿಮ ಅಂಗಣವು ಜಾತ್ರೆಯ ವೇಳೆ ದೈವಗಳು ವಿಶ್ರಾಂತಿ ಪಡೆಯುವ ಸ್ಥಳವಾಗಿದೆ. ಅಂಗಣದಲ್ಲಿ ಇಂದಿಗೂ ಭಕ್ತಾದಿಗಳು ಭಯಭಕ್ತಿಯಿಂದ ಮೌನವಾಗಿರುತ್ತಾರೆ.

ಪೂಮಾಣಿ-ಕಿನ್ನಿಮಾಣಿ ದೈವಗಳು ಮೇಲಿನ ಘಟನೆ ನಡೆದ ನಂತರ ಮಾಕೂರಿಗೆ ಬಂದರು. ಅಲ್ಲಿದ್ದ್ ಐವರು ದೈವಂಗಳನ್ನು ಹೊಡೆದೋಡಿಸಿದರು. ಮಹಾಕಾಳಿಯ ಬಾಯಿಗೆ ಬೀಗ ಜಡಿದರು. ಅದರ ಪರಿಣಾಮವಾಗಿ ಈಗಲೂ ಮಹಾಕಾಳಿ ಮೂಕಿಯಾಗಿದ್ದಾಳೆ.

ಸದುದ್ದೇಶದಿಂದ ಜನರ ಕಲ್ಯಾಣಕ್ಕಾಗಿ ಈ ಸಾಹಸವನ್ನು ಮಾಡಿದ ದೈವಗಳು ತದನಂತರ ಭದ್ರಕಾಳಿಯಲ್ಲಿ ಹೀಗೆಂದರು -

"ಭದ್ರಕಾಳಿ ನಿನ್ನನ್ನು ಕರೆದುಕೊಂಡು ಹೋಗಿ ನಮ್ಮ ಸ್ಥಾನದ ದ್ವಾರದಲ್ಲಿ ನಿಲ್ಲಿಸಬೇಕು"

"ಹಾಗಾಗ ಬೇಕಿದ್ದರೆ ನಿಮ್ಮ ಪ್ರತಿ ಕಾರ್ಯಕ್ಕೂ ರಕ್ತದಾನವಾಗಬೇಕು"

ಹೀಗೆಂದು ಭದ್ರಕಾಳಿ ಒಪ್ಪಿ ನೆಲೆವೂರಿದ ಅಂಬಿಲಡ್ಕದ ಅ ಪವಿತ್ರ ಸ್ಥಳದ ಸನಿಹ ಇವತ್ತಿನ ಕೋರಿಗುಂಟ ಇದೆ. ವಿಧಿ ಪ್ರಕಾರ ಕೋಳಿಬಲಿ ನಡೆಯುತ್ತದೆ. ಏನಾದರೂ ಏರುಪೇರಾದಲ್ಲಿ ಅದಕ್ಕೆ ಕಾರಣರಾದವರು ತೀವ್ರ ಶಿಕ್ಷೆಗೆ ಗುರಿಯಾದ ಸಂದರ್ಭಗಳೂ ದಾಖಲೆಯಲ್ಲಿವೆ.

ಬೀರ ತಂಬಿಲದ ಮೂರುದಿನ ಕೋಳಿಕಟ್ಟ ನಡೆಸುವ ವಾಡಿಕೆಯೂ ಹಿಂದಿನಿಂದ ನಡೆದುಬಂದಿದೆ. ಹೀಗೆ ನರಬಲಿ, ಕೋಳಿಬಲಿ, ಕೋರಿಗುಂಟ ಮುಂತಾದ ವಿಚಾರಗಳು ದೈವಾರಾಧನೆಗೆ ಸಂಬಂಧಿಸಿ ಚಿಂತನೀಯವಾಗಿವೆ.

Systems and Rituals of Sri Kshetra Ambiladka

ಮುಖವಾಡ

ಅಂಬಿಲಡ್ಕದ ಬೀರಣ್ಣಾಳ್ವ ದೈವದ ಮುಖ ಅಥವಾ ಮುಖವಾಡವು ಪ್ರಾಣಿ ಮುಖವನ್ನು ಪ್ರತಿನಿಧಿಸುವ ಮುಖವಾಡವಾಗಿದೆ. ಮುಖವಾಡ ರಚನೆಯಲ್ಲಿ ಸಹಜವಾಗಿಯೇ ಅಗಲವಾದ ತೆರೆದ ಬಾಯಿ, ಉದ್ದಕ್ಕೆ ಚಾಚಿರುವ ನಾಲಗೆ, ಕೋರೆಹಲ್ಲುಗಳು, ದಿಟ್ಟಿಸುವ ಕಣ್ಣುಗಳು...ಈ ಬಗೆಯ ಲಕ್ಷಣಗಳು ಮುಖವಾಡದಲ್ಲಿ ಕಾಣಬಹುದು. ಇದು ಉಗ್ರ ರೂಪದ ಮುಖವಾಡವಾಗಿದೆ. ಅಂಗಣ ಬಲಿ, ಬಲಿ ಸುತ್ತು ಕುಣಿತ ಮತ್ತು ಬಾರಣೆಯಂತಹ ಸಂದರ್ಭದಲ್ಲಿ ಈ ಮುಖವಾಡ ಬಳಕೆಯಾಗುತ್ತದೆ.

ಕುಣಿತ

ಭೂತದ ಗುಣ ಸ್ವಭಾವ, ಭೂತಗಳಿಗೆ ವೇಷ ಕಟ್ಟುವ ಸಂದರ್ಭದಲ್ಲಿ ಬಳಸುವ ಆಲಯ ಸಾಮಾಗ್ರಿಗಳು, ಭೂತದ ಸ್ಥಾನಮಾನ ಮೊದಲಾದ ಅಂಶಗಳು ಭೂತದ ಕುಣಿತವನ್ನು ನಿರ್ಧರಿಸುತ್ತವೆ. ಅಂಬಿಲಡ್ಕ ದೈವಗಳ ಬೆನ್ನಿಗೆ ಎತ್ತರ ಮತ್ತು ವಿಶಾಲವಾದ ಅಣಿ, ಸೊಂಟಕ್ಕೆ ಜಕ್ಕಲಣೆ, ಕೊರಳ ತುಂಬ ಆಭರಣ್, ದೊಡ್ಡ ಮುಖವಾಡ, ಆಯುಧಗಳು ಈ ವೇಷಭೂಷಣಗಳ ಭಾರಹೊತ್ತು ಸಾಗುವ ಕುಣಿತಕ್ಕೆ ತನ್ನದೇ ಆದ ಕೆಲವು ಮಿತಿಗಳಿವೆ. ಈ ದೈವಗಳು ಕುಣಿತ ಮತ್ತು ಅಭಿನಯಗಳನ್ನು ಸಂದರ್ಭಕ್ಕೆ ತಕ್ಕಂತೆ ನಿರ್ವಹಿಸುತ್ತವೆ.

ಆಯುಧಗಳು

ಅಂಬಿಲಡ್ಕದ ದೈವಗಳಾದ ಪೂಮಾಣಿ-ಕಿನ್ನಿಮಾಣಿ ದೈವಗಳು ಕಡ್ತಲೆ, ಬಿಲ್ಲು ಬಾಣಗಳನ್ನು ಬಳಸುತ್ತದೆ. ಭಕ್ತರ ಅಂಗೈಗೆ ಕಡ್ತಲೆ ಮುಟ್ಟಿಸಿ ಅಭಯ ನೀಡುತ್ತದೆ. ಭೂತದ ಕಾರ್ಣಿಕ ಪವಾಡಗಳನ್ನು ತಿಳಿಸುವ ಕಥಾನಕಗಳಲ್ಲಿ ಬರುವ ಉಲ್ಲೇಖಗಳಿಗೆ ಅನುಗುಣವಾಗಿ ಆಯುಧವನ್ನು ಭೂತಾರಾಧನೆಯ ರಂಗಭೂಮಿ ಪ್ರದರ್ಶನದಲ್ಲಿ ಬಳಕೆಯಾಗುತ್ತದೆ.

ಮಾತು

ಅಂಬಿಲಡ್ಕದ ದೈವಗಳ ಮಾತು ಸಂಭಾಷಣೆಯ ರೂಪದಲ್ಲಿದೆ. ಮಾತು ಕೂಡಾ ಧಾರ್ಮಿಕ ಉದ್ದೇಶಕ್ಕೆ ಪೂರಕವಾಗಿ ಬಳಕೆಯಾಗುತ್ತದೆ. ಈ ಬಗೆಯ ಮಾತುಗಳನ್ನು ಮದಿಪು ಎಂದು ಕರೆಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಭೂತವು ತನ್ನ ಭಕ್ತ ಬಾಂಧವರ ಬಳಗವನ್ನು ಹಾಗೂ ಆಡಳಿತ ವರ್ಗವನ್ನು ಉದ್ದೇಶಿಸಿ ಅಭಯದ ನುಡಿಯನ್ನು ಹೇಳುತ್ತದೆ. ಭಕ್ತಾದಿಗಳು ಭಕ್ತಿ, ಬಿನ್ನಹ, ವಿನಂತಿಯ ಭಾವನೆಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ.

ಊಜಾರು ಗುಳಿಗ ದೈವ

ಶಿವನ ಗಂಡುಗಣವಾದ ಊಜಾರು ಗುಳಿಗ ದೈವವು ಕುಂಬಳೆ ದೇವಸ್ಥಾನದಿಂದ ಊಜಾರು ಸಂಕಯ ಕಟ್ಟೆಯಲ್ಲಿಗೆ ಬರುತ್ತದೆ. ಅಲ್ಲಿಂದ ಅಂಬಿಲಡ್ಕದ ಪೂಮಾಣಿ-ಕಿನ್ನಿಮಾಣಿ ದೈವಗಳನ್ನು ಭೇಟಿಮಾಡುತ್ತದೆ. ಅಸುರ ದೈವವಾದ ಗುಳಿಗ ದೈವವು ಅಂಬಿಲಡ್ಕದ ಹತ್ತಿರ ನೆಲೆಯೂರಬೇಕೆಂದು ಕೇಳಿದಾಗ ದೈವಗಳು ಬೇಡಿಕೆಯನ್ನು ನಿರಾಕರಿಸುತ್ತವೆ ಮಾತ್ರವಲ್ಲ ಗುಳಿಗನಿಗೆ ಸಂಕಯ ಕಟ್ಟೆಯ ಕೆಳಗೆ ಮತ್ತು ಮುಜ್ಯೋಡುನಿಂದ ಮೇಲೆ ನೆಲೆಯೂರಲು ಭೌಗೋಳಿಕ ಪ್ರದೇಶವನ್ನು ದೈವಗಳು ಗುರುತಿಸಿ ಅನುಮತಿ ನೀಡುತ್ತವೆ. ಗ್ರಾಮದವರನ್ನು ಇಟ್ಟುಕೊಂಡು ಆರಾಧಿಸುವಂತೆ ಗುಳಿಗನಿಗೆ ದೈವಗಳು ಅನುಮತಿ ನೀಡುತ್ತವೆ. ಮೊತ್ತ ಮೊದಲಿಗೆ ಕಣಿಯ (ಬಲ್ಯಾಯ ಜಾತಿಯವರಿಂದ) ನಿಂದ ಆರಭಿಸಲ್ಪಟ್ಟ ದೈವ ನಂತರ ಭಂಡಾರಿ ಜಾತಿಯವರಿಂದ ಆರಾಧಿಸಲ್ಪಡುತ್ತಾ ಬಂತು. ಅಂಬಿಲಡ್ಕ ದೈವಗಳು ನೀಡಿದ ಸ್ಥಳದಲ್ಲೇ ಊಜಾರು ಗುಳಿಗನ ಸ್ಥಾನ (ತಾಣ) ವನ್ನು ಕಟ್ಟಿರುತ್ತಾರೆ. ಈ ದೈವಕ್ಕೆ ಸಂಬಂಧಿಸಿದಂತೆ ಬಂಬ್ರಾಣ, ಊಜಾರು, ಕೆಳಗಿನ ಊಜಾರು, ಭಂಡಾರದಮನೆ, ರಾಮ ಭಂಡಾರಿಯವರ ಮನೆ, ಬೋಳುಗುಡ್ಡೆ, ಕುತ್ತಕಲ್ಲು ಮುಂತಾದ ಪ್ರಮುಖ ಮರ್ಯಾದೆಯ ಮನೆತನಗಳಿವೆ. ದೈವವು ಮಲಯಾಳಿ ಭಾಷೆಯಲ್ಲಿ ಮಾತಾಡುತ್ತದೆ. ಈ ದೈವಕ್ಕೆ ಮೂರು ಅಂತರದ ಅಣಿ ತೆಂಗಿನ ತಿರಿಯಿಂದ ತಯಾರು ಮಾಡುತ್ತಾರೆ.

ಬಂಬ್ರಾಣದ ಪೂಕರೆ ಗದ್ದೆ ವಿಶೇಷತೆ

ಪೂಕರೆ ಗದ್ದೆಯು ಎಂಟು ಮುಡಿಯ ವಿಶಾಲವಾದ ದೈವಿಕ ಸಾನಿಧ್ಯವಿರುವ ಗದ್ದೆಯಾಗಿದೆ. ಸುಗ್ಗಿ ಮತ್ತು ಏಣಿಲು ಕೃಷಿ ಮಾಡುವ ಸಂದರ್ಭದಲ್ಲಿ ನಾಗದೇವರಿಗೆ ತಂಬಿಲ ನಡೆಯತಕ್ಕದ್ದು. ಮಧ್ಯಾಹ್ನದ ಮೊದಲೇ ನಾಟಿ ಮಾಡಬೇಕೆಂಬ ನಿಯಮವಿದೆ. ಹರಿಜನರು ಗದ್ದೆಗೆ ಸುತ್ತು ಬಂದು ಪಾಸ ಮುಟ್ಟಬೇಕು ಮತ್ತು ಬೆಳಿಗ್ಗಿನಿಂದಲೇ ಊಟಮಾಡದೇ ವ್ರತ ಹಿಡಿಯಬೇಕೆಂಬ ಸಂಪ್ರದಾಯವಿದೆ. ದೈವಗಳಾದ ಬಂಟೆ, ಕೊರ್ಮಾಡಿ ಮತ್ತು ನಾಗದೇವತೆಯನ್ನು ಈ ಗದ್ದೆಗೆ ಸಂಬಂಧಪಟ್ಟಂತೆ ಆರಾಧಿಸುತ್ತಾರೆ.

ಪೂಕರೆ ಗದ್ದೆಯಲ್ಲಿ ಬಂಟನ ಕೋಲವಾದ ನಂತರ ಬಂಬ್ರಾಣದ ಯಜಮನ ಮತ್ತು ಭೂತವು ಬಂಬ್ರಾಣದ ದೊಡ್ಡ ಮನೆಯವರೆಗೆ ಬಯಲಲ್ಲೇ ನಡೆದುಕೊಂಡು ಹೋಗಬೇಕೆಂಬ ನಿಯಮವಿದೆ. ಅನಂತರ ದೈವದ ಒಲಸಾರಿಯು ಬಂಬ್ರಾಣದ ಮನೆಯ ಅಂಗಣದಲ್ಲಿ ನಡೆಯುತ್ತದೆ. ಅಂದೇ ರಾತ್ರಿ ಬೊಬ್ಬರ್ಯ ದೈವ, ಕೊರತಿ ದೈವದ ಧರ್ಮ ನೇಮವು ನಡೆಯುತ್ತದೆ. ಪೂಕರೆ ಗದ್ದೆಯಲ್ಲಿ ಪೂಕರೆ ಹಾಕುವ ಕ್ರಮವೂ ಇದೆ. ಇಲ್ಲಿ ಪೂರ್ವದಲ್ಲಿ ಸಣ್ಣ ರೀತಿಯ ಕೋಣಗಳನ್ನು ಓಡಿಸುವ ಕಂಬಳವು ಗದ್ದೆಯ ಹತ್ತಿರದ ತೋಡಿನಲ್ಲಿ ನಡೆಯುತ್ತಿತ್ತಂತೆ.

ತಂಬಿಲ, ಆರಾಟ ತಂಬಿಲ, ಬೀರ ತಂಬಿಲ

ಅಂಬಿಲಡ್ಕ ಕ್ಷೇತ್ರದಲ್ಲಿ ಆರಾಧನೆಯ ಉತ್ಸವ ರೂಪದ ಆಚರಣೆಯಲ್ಲದೆ, ಭೂತದ ಗುಡಿಯೊಳಗೆ ಪರಿವಾರಗಳನ್ನು ಎಡೆ ಬಡಿಸಿ ಕೈಮುಗಿಯುವ ವಿಧಿಯನ್ನು ತಂಬಿಲ ಎಂದು ಕರೆಯುತ್ತಾರೆ. ಪ್ರತಿ ಸಂಕ್ರಮಣದಂದು ಈ ರೀತಿಯ ತಂಬಿಲವು ನಡೆಯುತ್ತದೆ. ಅಂದು ಊರ ಸಮಸ್ತರು ಸೀಯಾಳವನ್ನು ದೈವಗಳಿಗೆ ನೀಡಿ ಪನಿವಾರಗಳನ್ನು ಪಡೆದುಕೊಳ್ಳುತ್ತಾರೆ. ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಊರಿನ ಎಂಟು ಮನೆಗಳ ಮುಖ್ಯಸ್ಥರು ಸೇರಿ ದೈವಗಳನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಮಾತ್ರವಲ್ಲ ಆರಾಟ ತಂಬಿಲ (ಜಾತ್ರೆಯ ಮುಕ್ತಾಯದಲ್ಲಿ ನಡೆಯುವ ತಂಬಿಲ).