ಈಗಿನ ತಂತ್ರಿವರ್ಯ ಕರ್ಕುಳ ಬೂಡು ಶ್ರೀ ಶಂಕರನಾರಾಯಣ ಕಡಮಣ್ಣಾಯರು ತಮ್ಮ ತಂದೆ ಕರ್ಕುಳ ಬೂಡು ರಾಮಚಂದ್ರ ಕಡಮಣ್ಣಾಯರಿಂದ ತಾಂತ್ರಿಕ ವಿಧಿ ವಿಧಾನಗಳನ್ನು ಕಲಿತರು. ಹಲವು ತಲೆಮಾರುಗಳಿಂದ ಈ ಪರಿಸರದ ದೇವಾಲಯಗಳ ಹಾಗೂ ಭೂತಾಲಯಗಳ ತಾಂತ್ರಿಕ ವಿಧಿಗಳ ಜವಾಬ್ದಾರಿ ತಮ್ಮ ಮನೆತನಕ್ಕೆ ಪರಂಪರಾಗತವಾಗಿ ಬಂದಿರುವುದನ್ನು ಅವರು ನೆನೆದುಕೊಳ್ಳುತ್ತಾರೆ. ತಮ್ಮ ಮನೆತನದ ಉಪಾಸನಾ ಮೂರ್ತಿಯಾದ ಕರ್ಕುಳ ಬೂಡು ಶ್ರೀ ದುರ್ಗಪರಮೇಶ್ವರೀ ಅಮ್ಮನವರ ನಿತ್ಯ ಪೂಜೆ, ನೈವೇದ್ಯ, ನಂದಾದೀಪ, ದುರ್ಗಾನಮಸ್ಕಾರ ಪೂಜೆ, ತ್ರಿಕಾಲ ಪೂಜೆ, ನವರಾತ್ರಿ ಹಾಗೂ ಇತರ ಪರ್ವಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅಂಬಿಲಡ್ಕ ದೈವಸ್ಥಾನದ ಆಡಳಿತ ನಡೆಸುವ ಬಂಬ್ರಾಣ ಯಜಮಾನರ ಬಾಬ್ತು ಕರ್ಕಾಟಕ ಮಾಸದಲ್ಲಿ 12 ದಿನ ದುರ್ಗಾನಮಸ್ಕಾರ ಪೂಜೆ, ಕೊನೆಯ ದಿನ ಪೂಜೋತ್ಥಾನ ಸಮಾರಾಧನೆಗಳು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಇಂದಿಗೂ ತಪ್ಪದೆ ನಡೆದುಕೊಂಡು ಬರುತ್ತಿರುವುದು ಉಲ್ಲೆಖನೀಯ, ಈ ಮನೆತನದ ಹಿಂದಿನ ಹಿರಿಯರು ಮಂತ್ರವಾದ ಪ್ರವೀಣರು. ಮನೆತನಕ್ಕೆ ಈ ಹೆಸರು ಬರುವುದಕ್ಕೆ ಮಂತ್ರವಾದದಿಂದ ಕಡೆ ಎಲೆಯಲ್ಲಿ ಹೊಳೆದಾಟಿ ಬಂದವರೆಂಬ ಹಿನ್ನೆಲೆಯೇ ಕಾರಣ. ಸದ್ರಿ ಕಡಮಣ್ಣಾಯರ ಇನ್ನೊಂದು ಶಾಖೆ ಈಗ ನೀಲೇಶ್ವರದಲ್ಲಿದೆ.
ಪ್ರಕೃತ ಅಂಬಿಲಡ್ಕ ದೈವಸ್ಥಾನದ ತಂತ್ರಿಗಳಾಗಿರುವ ಶ್ರೀ ಶಂಕರನಾರಾಯಣ ಕಡಮಣ್ಣಾಯರು ಇತರ ಅನೇಕ ಕಡೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಶೇಡಿಕಾವು ಶ್ರೀ ಶಂಕರನಾರಾಯಣ ದೇವಸ್ಥಾನ, ಕುಂಬಳೆ, ಶ್ರೀ ಅಯ್ಯಪ್ಪ ದೇವಸ್ಥಾನ, ಕೆದ್ವಾರು ಶ್ರೀ ಸದಾಶಿವ ದೇವಸ್ಥಾನ ಇಚ್ಲಂಗೋಡು, ಕಜೆ ಶ್ರೀ ಜನಾರ್ದನ ದೇವಸ್ಥಾನ ಕಯ್ಯಾರು, ಸಣ್ಣತ್ತಡ್ಕ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕಯ್ಯಾರು, ಪರಿಂಗಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಮಂಗಲ್ಪಾಡಿ, ಕಾರ್ಲೆ ಬೋವಿ ಸಮಾಜದ ಗುತ್ಯಮ್ಮ ಭಗವತಿ ದೈವಸ್ಥಾನ, ಚೆರುಗೋಳಿ ಚೀರುಂಬಾ ಭಗವತಿ ದೈವಸ್ಥಾನ, ಆರಿಕ್ಕಾಡಿ ಪಾಡಾಂಗರೆ ಭಗವತಿ ದೈವಸ್ಥಾನ, ಬಂಟು ಕೊಟ್ಯ ದೂಮಾವತಿಸ್ಥಾನ ಇಚ್ಲಂಗೋಡು, ಆಮೆತ್ತೋಡು ಬಂಜನ್ ಕುಲಾಲ್ ಸಮಾಜದ ಆದಿಮಾಲ ಮಲರಾಯ ಸ್ಥಾನ, ಮಲರಾಯ ಬಂಟ ದೈವಸ್ಥಾನ ಅರಿಯಾಳ, ಪರ್ತಿಗಾರು ಚಾಮುಂಡೇಶ್ವರೀ ಸ್ಥಾನ ಉಕ್ಕಿನಡ್ಕ, ಬಂಬ್ರಾಣ ಬೈಲು ತರವಾಡು ಮೈಸಂದಾಯ, ಮಲರಾಯ ಸ್ಥಾನ, ಮುಗೇರು ಬೀರ್ನಾಳ್ವ, ಕೋಮಾರ್ ಚಾಮುಂಡಿ ಸ್ಥಾನ ಮುಂತಾದುವುಗಳು ಪ್ರಮುಖವಾದುವುಗಳು.